ಸೃಜನಾತ್ಮಕ ಚಟುವಟಿಕೆಯಿಂದ ಜ್ಞಾನ ವೃದ್ಧಿ
ಬೀದರ್:ಜು.15: ಸೃಜನಾತ್ಮಕ ಬೋಧನೆ ಹಾಗೂ ಚಟುವಟಿಕೆಗಳಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ ಎಂದು ಕೋಲಾರದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಮಂಜುಳಾ ಭೀಮರಾವ್ ನುಡಿದರು.
ನಗರದ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಟುವಟಿಕೆಗಳು ಹೊಸ ವಿಷಯದ ಸುಲಭ ಕಲಿಕೆಗೆ ನೆರವಾಗುತ್ತವೆ. ಮಕ್ಕಳಲ್ಲಿ ಸೃಜನಶೀಲತೆಯನ್ನೂ ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲದೊಂದಿಗೆ ಪರಿಶ್ರಮ ವಹಿಸಿದರೆ ಎಲ್ಲವೂ ಸಾಧ್ಯವಾಗಲಿದೆ ಎಂದು ಹೇಳಿದರು.
ಮಕ್ಕಳು ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಅದನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಸೃಜನಾತ್ಮಕ ಬೋಧನೆ ಏಕೆ ಅಗತ್ಯವಾಗಿದೆ ಎನ್ನುವ ಬಗ್ಗೆ ಶಿಕ್ಷಕರಿಗೂ ಅವರು ಮಾರ್ಗದರ್ಶನ ಮಾಡಿದರು.
ಜನಸೇವಾ ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು.
ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.