ಆದರ್ಶದ ಬದುಕಿಗೆ ಯಾವತ್ತೂ ಬೆಲೆ: ಮಹಾಂತ ಸ್ವಾಮೀಜಿ
ಕಲಬುರಗಿ:ಜು.15: ಮನುಷ್ಯ ಆದರ್ಶದ ಬದುಕನ್ನು ಕಳೆದಾಗ ಬೆಲೆಯುಳ್ಳ ಬದುಕಾಗುತ್ತದೆ. ಆಗ ಆ ಬದುಕಿಗೆ ಮೌಲ್ಯ, ಅರ್ಥ ಬರುತ್ತದೆ ಎಂದು ಮುದಗಲ್- ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ನುಡಿದರು.
ಹಾಗರಗಾ ಗ್ರಾಮದ ಲಿಂ.ಗಂಗಮ್ಮ ಹಾಗೂ ಲಿಂ. ಬಸವಣ್ಣಪ್ಪ ಕೇಸೂರ ಸ್ಮರಣಾರ್ಥ ಇಲ್ಲಿನ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 808ನೇ ಅರಿವಿನ ಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಡ, ದೀನ-ದಲಿತರಲ್ಲದೆ ಅನ್ಯ ಕೋವಿನವರಿಗೂ ಸಹಾಯ ಸಹಕಾರ ಮಾಡಿದ ಕೇಸೂರ ಮನೆತನ ನಿಜಕ್ಕೂ ಕಲ್ಯಾಣ ಕಾರ್ಯಕ್ಕೆ ಹೆಸರಾಗಿದೆ ಎಂದರು.
ಪರಸ್ಪರ ದ್ವೇಷಾಸೂಹೆಗಳಿಂದ ಕೂಡಿರುವ ಈ ಸಮಾಜದಲ್ಲಿ ಮನುಷ್ಯ ಮನುಷ್ಯರನ್ನು ಪ್ರೀತಿಸುವ, ಗೌರವಿಸುವ, ಸೌಹಾರ್ದಯುತವಾಗಿ ಬಾಳಿ ಬದುಕುವ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು.
ಹಿರಿಯರ ಸ್ಮರಣೆಯನ್ನು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೆ ಆ ನಿಮಿತ್ತ ಜವರಿಗೆ ಅನ್ನ ದಾಸೋಹ ಮತ್ತು ಜ್ಞಾನದಾಸೋಹ ಮಾಡುತ್ತಿರುವ ಅವರ ಮಕ್ಕಳು ಮಾದರಿ ಕಾರ್ಯ ಮಾಡುವ ಮೂಲಕ ಹಿರಿಯರ ಸ್ಮರಣೆಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ತ್ತಮ ವಿಚಾರ, ಸಂಸ್ಕøತಿಯನ್ನು ಹಂಚುವುದು, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಂಡಪ್ಪ ಕೇಸೂರ, ದತ್ತಿ, ದಾಸೋಹಿಗಳಾದ ಚಿತ್ರಶೇಖರ ಬಸವಣ್ಣಪ್ಪ ಪರಿವಾರದವರು, ಸಂಗೀತ ಕಲಾವಿದರು ಇದ್ದರು.
ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಡಾ. ಶಿವರಂಜನ ಸತ್ಯಂಪೇಟೆ, ಶರಣಗೌಡ ಪಾಳಾ, ಎಸ್.ವಿ.ಹತ್ತಿ, ಸತೀಶ ಸಜ್ಜನ, ವಿಶ್ವನಾಥ ಮಂಗಲಗಿ, ಮಲ್ಲಣ್ಞ ಗುಳಗಿ, ಸಂಗಣ್ಣ ಜಿ. ಸತ್ಯಂಪೇಟೆ ಇತರರು ಭಾಗವಹಿಸಿದ್ದರು.