ಒಳಪಂಗಡ ಮರೆತು ಒಂದಾಗುವತ್ತ ಗಮನ ಹರಿಸಲು ಕರೆ
ಸಂಜೆವಾಣಿ ವಾರ್ತೆ
ದಾವಣಗೆರೆ, ಜು.15;ಒಳ ಪಂಗಡಗಳನ್ನೆಲ್ಲಾ ಮರೆತು, ವೀರಶೈವ ಒಂದೇ ಎಂಬ ಮನೋಭಾವ ಮೂಡಿಸುವುದೇ ವೀರಶೈವ ಸಮಾಜದ ಆಶಯವಾಗಿದ್ದು, ಒಳ ಪಂಗಡಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸುವ ಕಡೆಗೂ ಸಮಾಜ ಬಾಂಧವರು ಮುಂದಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.ನಗರದ ಎಸ್ಸೆಸ್ ಲೇಔಟ್‌ ಬಿ ಬ್ಲಾಕ್‌ನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಎಜುಕೇಷನಲ್ ಟ್ರಸ್ಟ್‌ನಿಂದ ಸ್ಥಾಪಿಸಿದ ಡಾ.ಮಹಾಂತ ಸ್ವಾಮಿ ಪದವಿ ಪೂರ್ವ ಕಾಲೇಜು ಕಟ್ಟಡ, ಪಂಚಮಸಾಲಿ ಸಮಾಜದ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಳಪಂಗಡಗಳನ್ನೆಲ್ಲಾ ಮರೆತು, ಒಂದಾಗುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.ವೀರಶೈವ ಸಮಾಜದ ಆಶಯದಂತೆ ಎಲ್ಲಾ ಒಳ ಪಂಗಡಗಳನ್ನು ಬೇಧ ಮರೆತು, ಒಂದಾಗಬೇಕು. ಸಮಾಜದ ಭವಿಷ್ಯವಾದ ಯುವ ಸಮೂಹವು ಒಳ ಪಂಗಡಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು. ಉಪ ಪಂಗಡಗಳೆಲ್ಲಾ ಒಂದಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು, ಸಮಾಜ ಬಾಂಧವರು ಸಹ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದರೂ, ಸರ್ಕಾರಿ ಶಾಲೆಗಳ ಫಲಿತಾಂಶ ಪ್ರಮಾಣ ಇಳಿಮುಖವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಫಲಿತಾಂಶ ಕಡಿಮೆಯಾಗಲು ಕಾರಣವೇನೆಂಬುದನ್ನು ಸರ್ಕಾರವೂ ಹುಡುಕುತ್ತಿದೆ. ಇಷ್ಟು ವರ್ಷವಾದರೂ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಂಡಿಲ್ಲ. ಎಲ್ಲೆಡೆ ಉತ್ತಮ ಶಿಕ್ಷಕರು, ಬೋಧಕರನ್ನು ನೇಮಿಸುವುದು ಉತ್ತಮ. ಸರ್ಕಾರಿ ಶಾಲಾ-ಕಾಲೇಜು ಅಭಿವೃದ್ಧಿ, ಮೂಲ ಸೌಕರ್ಯ, ಗುಣಮಟ್ಟದ ಬೋಧನೆ ಮೂಲಕ ಫಲಿತಾಂಶ ಸುಧಾರಣೆಗೆ ಗಮನ ಹರಿಸಬೇಕುಎಂದು ಅವರು ಸಲಹೆ ನೀಡಿದರು.ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಸಿ.ಉಮಾಪತಿ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯ ಕೈಗೊಳ್ಳಲಿ. ಪಿಯುಕಾಲೇಜು ಆರಂಭಿಸುವ ಮೂಲಕ ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಸ್ವಾಮಿಗಳ ಹೆಸರನ್ನು ಚಿರಸ್ಥಾಯಿಯಾಗಿಸುವ, ಶ್ರೀಗಳ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ಉಮಾಪತಿ ಹಾಗೂ ಸಮಾಜದ ಮುಖಂಡರು ಸೇರಿ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಡಾ.ಶಾಮನೂರು ಶಿವಶಂಕರಪ್ಪ ಶ್ಲಾಘಿಸಿದರು.