ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೫: ಜಗಳೂರು ತಾಲ್ಲೂಕು ಗಡಿಭಾಗದಲ್ಲಿರುವ ಚಿಕ್ಕಮಲ್ಲನಹೊಳೆ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರ ಕ್ಲಬ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಹತ್ತನೇ ತರಗತಿಯ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಗಾರದ ಉದ್ಘಾಟನೆಯನ್ನು ಶಾಲೆಯ ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ನೆರವೇರಿಸಿ ಮಾತನಾಡಿ, ನಾನು ಒಬ್ಬ ವಿಜ್ಞಾನ ಶಿಕ್ಷಕನಾದರೂ ಕನ್ನಡ ಭಾಷಾ ವಿಷಯದ ಕುರಿತು ತುಂಬಾ ಅಭಿಮಾನವಿದೆ. ನಾನು ತರಗತಿಯ ಪ್ರಾರಂಭದಲ್ಲಿ ಕನ್ನಡ ಕಲಿಸುತ್ತೇನೆ. ಇತರೆ ವಿಷಯಗಳಿಗೆ ಕನ್ನಡವೇ ತಳಹದಿಯಾಗಿದ್ದು, ಮಕ್ಕಳು ಇದನ್ನು ಚೆನ್ನಾಗಿ ಕಲಿತರೆ ಉಳಿದ ವಿಷಯ ಸುಲಭವಾಗುತ್ತದೆ ಎಂದು ತಿಳಿಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರೌಢಶಾಲೆ ಹಿರೇಮಲ್ಲನಹೊಳೆಯ ಮುಖ್ಯಶಿಕ್ಷಕ ತೋಟಗಂಟಿ ಪ್ರಕಾಶ್ ಮಾತನಾಡಿ, ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ, ಸರಾಸರಿಗಿಂತ ಕಡಿಮೆ ಇರುವ ಮಕ್ಕಳಿಗೆ, “ಬುನಾದಿ ಸಾಕ್ಷರತಾ ಜ್ಞಾನ’ ಇರಲೇಬೇಕು. ಇಲ್ಲದಿದ್ದರೆ 10ನೇ ತರಗತಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ. ಶಿಕ್ಷಕರಾದ ನಾವು ಇದನ್ನು ಮೊದಲು ಕಲಿಸಬೇಕು ಎಂದರು. ನಂತರ ಕನ್ನಡ ವಿಷಯದಲ್ಲಿ  ಸುಲಭವಾಗಿ ವಿದ್ಯಾರ್ಥಿಗಳು ಉತ್ತೀರ್ಣವಾಗಲು ಅವಶ್ಯವಾದ ಅಂಕಗಳಿಸುವ ಕೌಶಲ್ಯವನ್ನು  ಶಿಕ್ಷಕರಿಗೆ ತಿಳಿಸಿಕೊಟ್ಟರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಗುರು ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮಂಜುನಾಥ್ ಅವರು ಫಲಿತಾಂಶ ಉತ್ತಮ ಪಡಿಸಲು ಮೂಲಸೌಕರ್ಯಗಳು ಹಾಗೂ ವಿವಿಧ ಮಜಲುಗಳು,ಕೌಶಲ್ಯಗಳ ಬಗ್ಗೆ ಶಿಕ್ಷಕರಿಗೆ ತಿಳಿಸಿದರು.ಕಾರ್ಯಗಾರದ ಯಶಸ್ಸಿಗೆ ಕಾರಣೀಭೂತರಾದ ಕ್ಲಬ್ ನ ಅಧ್ಯಕ್ಷ ತಮಲೇ ಹಳ್ಳಿ ಸರ್ಕಾರಿ ಪ್ರೌಢಶಾಲೆ ಲಂಕೇಶ್ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಕನ್ನಡ ಶಿಕ್ಷಕ ನಾಗರಾಜ್  ಸ್ವಾಗತಿಸಿದರು. ಮೌಲಾನ ಅಜಾದ್ ಶಾಲೆಯ ಬಸವರಾಜ್  ವಂದಿಸಿದರು ಹಾಗೂ ಶೃತಿ ನಿರೂಪಿಸಿದರು.