ಹನಿ ನೀರಾವರಿಗೆ ಸಹಾಯಧನ ಕಡಿತ; ಆಪ್ ಖಂಡನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೩:  ಹನಿ ನೀರಾವರಿಗೆ ರೈತರಿಗೆ ನೀಡುತ್ತಿದ್ದ ಶೇ.75ರ ಸಹಾಯಧನವನ್ನು ದಿಢೀರನೆ ಶೇ.45 ಕ್ಕೆ ಇಳಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು  ಜಿಲ್ಲಾ ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸಿದೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಎಎಪಿ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಮಾತನಾಡಿ ಗ್ಯಾರಂಟಿ ಯೋಜನೆಯ ಹಣಕಾಸು ಕೊರತೆ ತೂಗಿಸಲು ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿರುವ ಹನಿ ನೀರಾವರಿ ಮೇಲಿನ ಸಬ್ಸಿಡಿ ಮೊತ್ತವನ್ನು ಇಳಿಕೆ ಮಾಡಿ ಆದೇಶ ಮಾಡಿರುವುದು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಳೆಯ ಅಭಾವ ಮತ್ತು ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಯಿಂದ ರಾಜ್ಯದ ಶೇ.50-60 ರಷ್ಟು ರೈತರು ಪಂಪ್‌ಸೆಟ್ ಆಧಾರಿತ ಹನಿ ನೀರಾವರಿ ಮೂಲಕ ಬೆಳೆ ಬೆಳೆಯುತ್ತಿದ್ದು, ಸಾಮಾನ್ಯ ರೈತರಿಗೆ ಶೇ.75 ರಷ್ಟು ಮತ್ತು ಎಸ್ಸಿ-ಎಸ್ಟಿ ರೈತರಿಗೆ ಶೇ.90 ರಷ್ಟು ಸಬ್ಸಿಡಿ ನೀಡುತ್ತಿದ್ದುದರಿಂದಲೇ  ಹನಿ ನೀರಾವರಿ ಅಳಡಿಸಿಕೊಳ್ಳಲು ಶಕ್ತರಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಸಬ್ಸಿಡಿಯಲ್ಲಿ ಕಡಿತ ಮಾಡಿದ್ದರಿಂದ ರೈತ ಸಮುದಾಯಕ್ಕೆ ಬರೆ ಎಳೆದಂತೆ ಆಗಿದ್ದು ಇದರಿಂದ ಹನಿ ನೀರಾವರಿ ಅಳವಡಿಸಿಕೊಳ್ಳುವುದರಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಿದರು.ಹನಿ ನೀರಾವರಿ ಅಳವಡಿಸಿಕೊಳ್ಳಲು ರೂ.1 ಲಕ್ಷ ವೆಚ್ಚ ಮಾಡಿದರೆ ಅದರಲ್ಲಿ ಸಾಮಾನ್ಯ ರೈತರಿಗೆ ರೂ.25 ಸಾವಿರ ಹಾಗೂ ಎಸ್ಸಿ/ಎಸ್ಟಿ ರೈತರಿಗೆ ರೂ ೧೦ ಸಾವಿರ  ಖರ್ಚು ಬರುತ್ತಿತ್ತು. ಉಳಿದದ್ದು ಸರ್ಕಾರದ ಸಹಾಯಧನದಲ್ಲೇ ಸರಿ ಹೊಂದುತ್ತಿತ್ತು ಆದರೆ ಈಗ ಸಾಮಾನ್ಯ ರೈತರು ರೂ.55 ಸಾವಿರ ವೆಚ್ಚದ ಹೊರೆ ಹೊರಬೇಕಾಗಿದೆ ಇಷ್ಟೊಂದು ವೆಚ್ಚ ಮಾಡಿ ಹನಿ ನೀರಾವರಿ ಅಳವಡಿಸಿಕೊಳ್ಳುವುದು ರೈತರಿಗೆ ಕಷ್ಟ ಸಾಧ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಆದ್ದರಿಂದ ರಾಜ್ಯ ಸರ್ಕಾರ ಸಹಾಯಧನ ಕಡಿತಗೊಳಿಸುವ ನಿರ್ಧಾರವನ್ನು ಕೈಬಿಡಬೇಕು. ಹಿಂದಿನಂತೆ ರೈತರ ಸಬ್ಸಿಡಿ ಮುಂದುವರೆಸಬೇಕು ಇಲ್ಲದಿದ್ದರೆ ಆಮ್ ಆದ್ಮ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ  ಎಸ್.ಕೆ.ಆದಿಲ್ ಖಾನ್, ಸುರೇಶ್ ಶಿಡ್ಲಪ್ಪ, ಮೊಹಮದ್ ಯೂಸುಫ್,ಧರ್ಮಪ್ಪ  ಇದ್ದರು.