ಹಿಂದಿನ ಬಿಜೆಪಿ ಪಾಲಿಕೆ ಆಡಳಿತದ ಅವೈಜ್ಞಾನಿಕ ನೀತಿಯಿಂದ ಜನತೆಗೆ ಹೊರೆ; ಕಾಂಗ್ರೆಸ್ ಸದಸ್ಯರ ಆರೋಪ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೫;  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಳಕೆದಾರರ (ಎಸ್ ಡ್ಲ್ಯೂ ಎಂ) ಶುಲ್ಕ ಹಾಗೂ ಒಳಚರಂಡಿ ಶುಲ್ಕ ಹೆಚ್ಚಾಗಲು ಹಿಂದಿನ  ಬಿಜೆಪಿ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಾಲಿಕೆ ಆಡಳಿತ ಕಾರಣ ಎಂದು ಪಾಲಿಕೆ ಸದಸ್ಯರಾದ ಎ.ನಾಗರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರುಬಳಕೆದಾರರ ಶುಲ್ಕ (ಎಸ್ ಡ್ಲ್ಯೂ ಎಂ) ಹಾಗೂ ಒಳರಂಡಿ ಶುಲ್ಕ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕಾರ 2019 ರ ಅಕ್ಟೋಬರ್ ೯  ರ ಕರ್ನಾಟಕ ಸರ್ಕಾರದ ಆದೇಶದಂತೆ 2021 ರ ಫೆಬ್ರವರಿ ೧ ರಂದು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಬಳಕೆದಾರರ ಶುಲ್ಕ ಹಾಗೂ ಒಳಚರಂಡಿ ಶುಲ್ಕವನ್ನು ಪರಿಷ್ಕರಿಸಿ, ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರ ಭಾರಿ ವಿರೋಧದ ನಡುವೆಯು ಅಂಗೀಕರಿಲಾಗಿದೆ ಆದರೀಗ ವಿಪಕ್ಷ ನಾಯಕರು ಹಾಗೂ ಬಿಜೆಪಿ ಮುಖಂಡರು ಬಳಕೆದಾರರ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಹೇಳುತ್ತಿರುವುದು ಖಂಡನೀಯ ಎಂದರು.ಬಿಜೆಪಿ ಆಡಳಿತ ಸಮಯದಲ್ಲಿ 2023-24ನೇ ಸಾಲಿನಿಂದ ಜಾರಿಗೆ ಬರುವಂತೆ  ದರಗಳನ್ನು ಪರಿಷ್ಕರಿಸಲಾಗಿದ್ದು, ಅದರಂತೆ 2024-25ನೇ ಸಾಲಿಗೆ ಜಾರಿಗೆ ಬಂದಿರುತ್ತವೆ.ಪ್ರಸ್ತುತ ವಸತಿಗೆ ಪ್ರತಿ ತಿಂಗಳಿಗೆ 500 ಚ.ಅಡಿಗೆ 30 ರೂ, 500 ರಿಂದ 1000 ಚ.ಅಡಿವರೆಗೆ ರೂ.40, 1000 ರಿಂದ 2000 ಚ.ಅಡಿವರೆಗೆ ರೂ.50. 2000 ಚ.ಅಡಿಗಳ ಮೇಲ್ಪಟ್ಟ ಸ್ವತ್ತುಗಳಿಗೆ ರೂ.75 ಹಾಗೂ ವಾಣಿಜ್ಯಕ್ಕೆ 1000 ಚ.ಅಡಿಗೆ ತಿಂಗಳಿಗೆ ರೂ.100, 1000 ರಿಂದ 3000 ಚ.ಅಡಿ ವರೆಗೆ ರೂ.300, 3000 ರಿಂದ 5000 ಚ.ಅಡಿ ವರೆಗೆ ರೂ.500, 5000 ಚ.ಅಡಿ ಮೇಲ್ಪಟ್ಟ ಸೊತ್ತುಗಳಿಗೆ ರೂ.750 ಮತ್ತು ಖಾಲಿ ನಿವೇಶನಕ್ಕೆ ಒಳಚರಂಡಿ ಶುಲ್ಕವನ್ನು ಕೈಬಿಟ್ಟು ಬಳಕೆದಾರರ ಶುಲ್ಕ ಪ್ರತಿ ಚದುರಡಿಗೆ 20 ಪೈಸೆಯಂತೆ ಪ್ರತಿ ತಿಂಗಳಿಗೆ ಪರಿಷ್ಕರಿಸಲಾಗಿದೆ.ಮಹಾನಗರ ಪಾಲಿಕೆಯಲ್ಲಿ ಹಿಂದಿನ ಬಿಜೆಪಿ ಆಡಳಿತದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರ ವಿರೋಧದ ನಡುವೆಯು ಬಳಕೆದಾರರ ಶುಲ್ಕ ಹಾಗೂ ಒಳರಂಡಿ ಶುಲ್ಕಗಳ ಹೆಚ್ಚಳವನ್ನು ಅಂಗೀಕರಿಸಿರುತ್ತಾರೆ.ಆದರೆ, ಬಳಕೆದಾರರ ಶುಲ್ಕವು ಈ ಹಿಂದೆ 2022-23ನೇ ಸಾಲಿನ ವರೆಗೆ
ವಸತಿಗೆ ಪ್ರತಿ ತಿಂಗಳಿಗೆ 1000 ಚ.ಅಡಿವರೆಗೆ ರೂ.10, 1000 ರಿಂದ 2000 ಚ.ಅಡಿವರೆಗೆ ರೂ.30, 3000 ಚ.ಅಡಿಗಳ ಮೇಲ್ಪಟ್ಟ ಸ್ವತ್ತುಗಳಿಗೆ ರೂ.50 ನಿಗದಿಮಾಡಲಾಗಿದೆ ಪಾಲಿಕೆಯಲ್ಲಿ ಬಿಜೆಪಿಯಿಂದ ಮೇಯರ್ ಆಗಿದ್ದ ಶ್ರೀಮತಿ ಜಯಮ್ಮ ಗೋಪಿನಾಯ್ಕಅವರು 2024-25ನೇ ಸಾಲಿನಿಂದ ಜಾರಿಗೆ ಬರುವಂತೆ ಒಳಚರಂಡಿ ಶುಲ್ಕವನ್ನು ಆಗಿನ ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ಗೃಹ ಬಳಕೆಗೆ ವರ್ಷಕ್ಕೆ ರೂ.600, ಗೃಹೇತರ ವರ್ಷಕ್ಕೆ ರೂ.1200 ಹಾಗೂ ವಾಣಿಜ್ಯ/ಕೈಗಾರಿಕೆಗೆ ಕೈ ರೂ.2400/- ರಂದು ಪರಿಷ್ಕರಿಸಿ ಅಂಗೀಕರಿಸಿರುತ್ತಾರೆ. ಈ ಆದೇಶದ ಪ್ರಕಾರ 2024-25ನೇ ಸಾಲಿನಲ್ಲಿ ಮಾರುಕಟ್ಟೆ ದರಗಳು ಪರಿಷ್ಕರಣೆ ಆಗಿರುವುದರಿಂದ ಬಿಜೆಪಿ ಸರ್ಕಾರವು ಅನುಮೋದಿಸಿರುವಂತೆ ಆಸ್ತಿ ತೆರಿಗೆ ಹೆಚ್ಚಳವಾಗಿರುತ್ತವೆ.ಈ ತೆರಿಗೆ ಹೆಚ್ಚಾಗಲು ಮೂಲ ಕಾರಣ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿದ್ದ ಬಿಜೆಪಿ ಆಡಳಿತವೇ ಕಾರಣವಾಗಿದೆ ಎಂದು ಆರೋಪಿಸಿದರು.ಒಳಚರಂಡಿ ಶುಲ್ಕಗಳನ್ನು ಹೆಚ್ಚಿಗೆ ಮಾಡಿರುವುದನ್ನು ಮುಂದಿನ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಬಿಜೆಪಿ ಸರ್ಕಾರವು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ನಿರ್ಣಯಗಳನ್ನು ಪರಿಶೀಲಿಸಿ, ಶುಲ್ಕಗಳನ್ನು ಪರಿಷ್ಕರಿಸಿ ಕಡಿಮೆ ಮಾಡಲು ತೀರ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್,ಜಗದೀಶ್,ಯಾಸಿನ್ ಯರಗಲ್,ಸತೀಶ್ ಉಪಸ್ಥಿತರಿದ್ದರು.