ಜು.29ರಿಂದ ಗೈರು ಹಾಜರಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.15:- ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 29ರಿಂದ ಕಚೇರಿ ಕೆಲಸಗಳಿಗೆ ಗೈರು ಹಾಜರಾಗಬೇಕಾಗುತ್ತದೆ. ಮುಂದಿನ ಪರಿಣಾಮ ಎದುರಿಸಲು ಸರ್ಕಾರ ಸಿದ್ಧವಾಗಲಿ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಎಚ್ಚರಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ನೂತನ ಜನಪ್ರತಿನಿಧಿಗಳಿಗೆ ಅಭಿನಂದನೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ನೌಕರರ ಸಮಾವೇಶದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಯ ಭರವಸೆ ನೀಡಿದ್ದರು. ಆದರೆ, 3 ತಿಂಗಳು ಕಳೆದರೂ ಈ ಬಗ್ಗೆ ಯೂವುದೇ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿಯೇ ಜಿಎಸ್‍ಟಿ ಸಂಗ್ರಹದಲ್ಲಿ ರಾಜ್ಯವನ್ನು 2ನೇ ಸ್ಥಾನಕ್ಕೇರಿಸಿದ ಸಾಧನೆ, ಗ್ಯಾರಂಟಿಗಳ ಅನುಷ್ಠಾನದಲ್ಲಿ ನೌಕರರ ಕೊಡುಗೆ ಅಪಾರ. ಆದರೆ, ಶೇ27.5 ಫಿಟ್‍ಮೆಂಟ್ ಕೊಡಲಾಗುವುದಿಲ್ಲ, ಆರ್ಥಿಕ ಸೌಲಭ್ಯಗಳನ್ನು 2025ರಿಂದ ನೀಡಲಾಗುತ್ತದೆ ಎಂಬ ಮಾತುಗಳ ವಿಧಾನಸೌಧದ ಮೊಗಸಾಲೆಯಲ್ಲಿ ಕೇಳುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದರು.
ಸರ್ಕಾರಿ ನೌಕರರು ಸಂಘ ಮತ್ತು ಸರ್ಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ಷಡಕ್ಷರಿ ಅವರು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಮಾತುಗಳನ್ನು ಕೇಳಲು ನಾನು ಸಿದ್ಧನಿಲ್ಲ. ಈಗಾಗಲೇ ಸಾಕಷ್ಟು ಅವಕಾಶ ನೀಡಿಯಾಗಿದೆ. ಓಪಿಎಸ್ ಜಾರಿ, ಆರೋಗ್ಯ ಸಂಜೀವಿನಿ ವಿಮೆ ಜಾರಿಯಲ್ಲೂ ಮೀನಾಮೇಷ ಏಣಿಸುತ್ತಿರುವುದು ಖಂಡನೀಯ. ಎಲ್ಲರೂ ಒಗ್ಗಟ್ಟಾಗಿ ಸರ್ಕಾರವನ್ನು ಟೀಕಿಸದೇ, ಮೌನವಾಗಿ ಗೈರು ಹಾಜರಾಗಿ ಪ್ರತಿಭಟಿಸಿ ಎಂದು ಕರೆ ನೀಡಿದರು.
ಸರ್ಕಾರಿ ನೌಕರರ ಮಕ್ಕಳು ಉತ್ತಮ ಫಲಿತಾಂಶ ಪಡೆದವರಿಗೆ ಪುರಸ್ಕರಿಸಲಾಗುತ್ತಿದೆ. ರಾಜ್ಯದಲ್ಲಿ 9 ಸಾವಿರ ಮಕ್ಕಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಇಂದು ಪ್ರತಿ ಅಂಕಕ್ಕೂ ಸ್ಪರ್ಧೆ ಏರ್ಪಡುತ್ತಿದೆ. ಭವಿಷ್ಯದಲ್ಲಿ ಉತ್ತಮ ಸ್ಥಾನ ಹೊಂದಲು ಎಸ್‍ಎಸ್‍ಎಲ್ ಸಿ ಮತ್ತು ಪಿಯು ಉತ್ತಮ ಘಟ್ಟವಾಗಿದ್ದು, ನಿರಂತರ ಪ್ರಯತ್ನದಿಂದ ಯಶಸ್ಸನ್ನು ಸಾಧಿಸಬೇಕು. ವಿದ್ಯಾರ್ಥಿಗಳು ತಮಗೆ ಶಿಕ್ಷಣ, ಉತ್ತಮ ಜೀವನ ಕಲ್ಪಿಸಿದ ತಂದೆ ತಾಯಿಯನ್ನು ಗೌರವಿಸುವ, ಪ್ರೀತಿಸುವ ಸಂಸ್ಕಾರವನ್ನು ಹೊಂದಬೇಕು. ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಯುವಶಕ್ತಿಯ ಪ್ರಯತ್ನ ಅಗತ್ಯ. ಓದಿನೊಂದಿಗೆ ಸುಭದ್ರ ಸಮಾಜ ಕಟ್ಟಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒqಯರ್ ಮಾತನಾಡಿ, ಮೈಸೂರು- ಕೊಡಗು ಜನರ ಅಭಿಮಾನ ಮತ್ತು ಮೈಸೂರಿನ ಪ್ರಾಚೀನ ಸಂಸ್ಕೃತಿ ಮತ್ತು ಪ್ರಗತಿಪರತೆಯನ್ನು ಉಳಿಸಿಕೊಂಡು ಹೋಗುವುದು ಪ್ರಮುಖ ಆದ್ಯತೆಯಾಗಿದೆ. ಜನರ ಜೀವನವನ್ನು ಸಮೃದ್ಧಗೊಳಿಸುವುದು ಮುಂದಿನ ಮುಖ್ಯ ಕೆಲಸವಾಗಿದೆ. 2047ರಲ್ಲಿ ವಿಕಸಿತ ಭಾರತದ ನಿರ್ಮಾಣ ಮಾಡಬೇಕು ಎಂಬ ಪ್ರಧಾನಿ ಸರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ನಾವು ಬೆಂಬಲಿಸಬೇಕು. ಕ್ಷೇತ್ರವೂ ಈ ನಿಟ್ಟಿನಲ್ಲಿ ಮುನ್ನಡೆ ಸಾಧಿಸಲು ನಮ್ಮ ಕೈಲಾದ ಸಹಕಾರ ಮಾಡುತ್ತೇನೆ. ಸರ್ಕಾರಿ ನೌಕರರ ಅಗತ್ಯ ಬೇಡಿಕೆಯನ್ನು ಪರಿಶೀಲಿಸಿ ಬೆಂಬಲ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಭಾಗವಹಿಸಿ ವಿದ್ಯಾರ್ಥಿಗಳಿಗೆ ವೈಯಕ್ತವಾಗಿ 1 ಲಕ್ಷ ರೂ. ದೇಣಿಗೆ ನೀಡಿದರು. 350 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಗೋವಿಂದರಾಜು, ರುದ್ರಪ್ಪ, ಸಿದ್ದರಾಮಣ್ಣ, ಮಲ್ಲಿಕಾರ್ಜುನ್, ಶ್ರೀನಿವಾಸ್, ರೇವಣ್ಣ, ರಮೇಶ್ ಕುಮಾರ್, ಎಸ್.ಜೆ.ರಮೇಶ್, ಮಾಲಂಗಿ ಸುರೇಶ್ ಸೇರಿದಂತೆ ತಾಲೂಕಿನ ಅಧ್ಯಕ್ಷರು ಪಾಲ್ಗೊಂಡಿದರು.