ಹೆಸರು ಬೆಳೆಗೆ ಕೀಟಬಾಧೆ
ಲಕ್ಷ್ಮೇಶ್ವರ,ಜು15: ತಾಲೂಕಿನ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬೆಳೆ ಈಗಾಗಲೇ ಬಿತ್ತನೆಯಾಗಿ ಬೆಳೆದು ಹೂ ಗಟ್ಟುವ ಸಮಯದಲ್ಲಿ ಹೆಸರು ಬೆಳೆಗೆ ಕೊಂಬು ಕೀಟ ಹುಳ ಬೆಳೆಯನ್ನು ನಾಶಪಡಿಸುತ್ತಿರುವುದು ರೈತರಲ್ಲಿ ಕಳವಳವನ್ನುಂಟು ಮಾಡಿದೆ.
ತಾಲೂಕಿನಾದ್ಯಂತ ರೈತರು ಸುಮಾರು ಎಂಟತ್ತು ಸಾವಿರ ಹೆಕ್ಟರ್ ಜಮೀನಿನಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದು ಈಗ ಈ ಬೆಳೆಗೆ ಕೊಂಬು ಕೀಟ ಎಲೆಗಳನ್ನು ತಿಂದು ಬೆಳೆಯನ್ನು ಹಾನಿ ಮಾಡುತ್ತಿದೆ.
ತಾಲೂಕಿನ ಅಡರಕಟ್ಟಿ ಸಮೀಪದ ರೈತ ಮಂಜುನಾಥ್ ನರೇಗಲ್ ಅವರ ಜಮೀನಿನಲ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ಗೌಡ ನರಸಮ್ಮನವರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಹೆಸರು ಬೆಳೆಗೆ ಹಸಿರು ಬಣ್ಣದ ಕೊಂಬು ಕೀಟ ಅಂದರೆ ಇದು ದೇಹದ ಹಿಂಭಾಗದಲ್ಲಿ ಚಿಕ್ಕದಾದ ಕೊಂಬನ್ನು ಹೊಂದಿದೆ . ಇದು ಹೆಸರು ಎಳ್ಳು ಮತ್ತು ಉದ್ದಿನ ಬೆಳೆಯ ಬೆಳೆಗಳಿಗೆ ಹೆಚ್ಚು ಹಾನಿಯನ್ನು ಮಾಡುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ
ಕೊಂಬಿನ ಹುಳು ಹತೋಟಿ ಮಾಡಲು ಲ್ಯಾಂಬಡಾ ಸೈಹಾ ಲೋತಿನ್ ಕ್ರಿಮಿನಾಶಕವನ್ನು 16 ಲೀಟರ್ ನೀರಿನಲ್ಲಿ 25 ಎಂಎಲ್ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ಕೃಷಿ ಸಹಾಯಕ ನಿರ್ದೇಶಕರಾದ ರೇವಣಪ್ಪ ಮನಗೂಳಿ ಅವರು ರೈತರು ಹೆಸರು ಬೆಳೆ ಹೂವು ಕಾಯಿ ಕಟ್ಟುವ ಹಂತದಲ್ಲಿ ಇರುವುದರಿಂದ ಇಲಾಖೆಯ ಸಲಹೆಯನ್ನು ಪಡೆದುಕೊಂಡು ಕೊಂಬು ಕೀಟದ ಹುಳವನ್ನು ಹತೋಟಿಗೆ ತರಬೇಕು ಎಂದು ಹೇಳಿದ್ದಾರೆ.