ಪ್ರಶಸ್ತಿ ಪ್ರದಾನ ಸಮಾರಂಭ
ಸಂಜೆವಾಣಿ ನ್ಯೂಸ್
ಮೈಸೂರು: ಜು.15:- ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೊಟ್ಟಮೊದಲು ಮೀಸಲಾತಿ ತಂದು, ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಕೆ.ಹೆಚ್. ರಾಮಯ್ಯ ಅವರ ಆದರ್ಶವಾದ ಜೀವನ ಮತ್ತು ಸಾಧನೆಗಳನ್ನು ಯುವಜನರಿಗೆ ಪರಿಚಯಿಸುವ ಕಾರ್ಯ ಆಗಬೇಕು ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ವತಿಯಿಂದ ನಗರದ ದ ಪ್ರೆಸಿಡೆಂಟ್ ಹೋಟೆಲ್ ಸಭಾಗಂಣದಲ್ಲಿ ನಡೆದ ‘ಕೆ.ಹೆಚ್. ರಾಮಯ್ಯ’ ಸಂಸ್ಮರಣೆ ಮತ್ತು ಬಾಲ ವಿಕಾಸಶ್ರೀ, ಯುವ ವಿಕಾಸಶ್ರೀ ಹಾಗೂ ವಿಕಾಸಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರು ರಾಜಕುಟುಂಬಕ್ಕೆ ನಿಕಟವರ್ತಿಯಾಗಿದ್ದ ರಾಮಯ್ಯ ಅವರು ಸಹಕಾರ ಇಲಾಖೆಯ ಮುಖ್ಯಸ್ಥರಾಗಿ ಕೆಲಸ ಮಾಡುವಾಗ, ಸಮಾಜದ ಎಲ್ಲ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ, ಅವರವರ ಸಂಘಗಳ ಸ್ಥಾಪಿಸಿ, ಅಗತ್ಯ ಮಾರ್ಗದರ್ಶನ ನೀಡಿ ನೆರವಾದ ಉದಾರ, ಉದಾತ್ತ, ವಿಶಾಲ ಮನೋಭಾವದರಾಗಿದ್ದರು. ಇಂತಹ ಮಹಾನ್ ಚೇತನ ರಾಮಯ್ಯ ಸಮಾಧಿ ಸ್ಥಳದ ಅಭಿವೃದ್ಧಿ ಆಗಬೇಕು ಎಂದರು.
ಗ್ರಾಮೀಣ ಪ್ರದೇಶದ ಶಿಕ್ಷಣಾಂಕ್ಷಿ ಬಡ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಉಚಿತ ಮತ್ತು ಊಟದ ವ್ಯವಸ್ಥೆ ಕಲ್ಪಿಸಿ, ಅವರು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ನೆರವಾದ ಕೆ.ಹೆಚ್. ರಾಮಯ್ಯ ಅವರು ನಿತ್ಯ ಸ್ಮರಣೀಯರು ಎಂದು ಶ್ಲಾಘಿಸಿದರು.
ಸಮಾರಂಭ ಉದ್ಘಾಟಿಸಿದ ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ವ್ಯಕ್ತಿ ಸಾಧನೆ ಮಾಡಲು, ಗುರಿ ತಲುಪಲು ಜ್ಞಾನ ಅಗತ್ಯ. ಆದ್ದರಿಂದ ಜ್ಞಾನ ಸಂಪಾದನೆ ಗೆ ಹೆಚ್ಚು ಮಹತ್ವ ನೀಡಬೇಕು. ಇದರಿಂದ ವ್ಯಕ್ತಿತ್ವ ಉತ್ತಮವಾಗುತ್ತದೆ. ವ್ಯಕ್ತಿಗೆ ಸಾವಿದೆ, ಆದರೆ ವ್ಯಕ್ತಿತ್ವಕ್ಕೆ ಸಾವಿಲ್ಲ ಎಂದರು.
ದೇಶದ ಜನರಲ್ಲಿ ಶೇ. 30ರಷ್ಟು ಯುವಜನರಿದ್ದಾರೆ. ಇವರೇ ದೇಶದ ನಿಜವಾದ ಆಸ್ತಿ. ಸಮಾಜಕ್ಕಾಗಿ ಅಪಾರ ಸೇವೆ ಸಲ್ಲಿಸಿರುವ ತ್ಯಾಗಮಯಿ ಕೆ.ಹೆಚ್. ರಾಮಯ್ಯರಂತಹ ಮಹಾನ್ ಸಾಧಕರ ಆತ್ಮ ಚರಿತ್ರೆ, ಜೀವನ ಚರಿತ್ರೆ ಓದುವ ಮೂಲಕ ಯುವಜನತೆ ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಕೃಷಿ ವಿಜ್ಞಾನಿ ಡಾ. ವಸಂತ್ ಕುಮಾರ್ ತಿಮಕಾಪುರ, ಸಾಹಿತಿ ಮತ್ತು ಸಂಘಟಕರು ಟಿ. ಸತೀಶ್ ಜವರೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ಶ್ರೀರಂಗಪಟ್ಟಣ ಪುರಸಭಾ ಸದಸ್ಯ ಎಂ. ನಂದೀಶ್, ವೇದಿಕೆಯ ರಾಜ್ಯಾಧ್ಯಕ್ಷೆ ಹೆಚ್.ಎಲ್. ಯಮುನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಮಿಲ್ ಶಿವಣ್ಣ, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಡಾ. ಬಲ್ಲೇನಹಳ್ಳಿ ವಿಜಯ ಕುಮಾರ್ ಉಪಸ್ಥಿತರಿದ್ದರು.
ಬಾಲ ಪ್ರತಿಭೆಗಳಾದ ಭೈರವಿ ಮಹೇಶ್, ಬಿ. ಪ್ರಜ್ವಲ್ ಗೌಡ, ಆರ್.ಟಿ. ಕುಶಾಲ್ ಗೌಡ, ಚರಿತ್ ಅದಮ್ಯ, ಜೆ. ಮಯೂರ್ ಗೌಡ, ವಿವಿಧ ಕ್ಷೇತ್ರದ ಸಾಧಕರಾದ ಡಾ.ಕೆ. ಕುಮಾರ್, ಡಾ. ಉಮೇಶ್ ಬೇವಿನಹಳ್ಳಿ, ಹೆಚ್.ಎಸ್. ಪ್ರತಿಮಾ ಹಾಸನ, ಸಿ.ಎಸ್. ವೆಂಕಟೇಶ್, ಬಿ.ಕೆ. ಸಂಧ್ಯಾರಾಣಿ, ಹನುಮಂತೇಶ್, ಗಣೇಶ್ ನಿಲುವಾಗಿಲು, ಬಿ.ಆರ್. ಬಸವರಾಜು, ಪಿ.ಕೆ. ದೀಪು ಸೇರಿದಂತೆ ಹಲವು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.