ಗ್ರಾಹಕರಿಗೆ ಸಾಲ ಪಡೆಯಲು ಸಹಕಾರ -ಸಿ.ಇ.ಓ
ಕೋಲಾರ,ಜು,೧೫-ದೇಶದ ಯಾವುದೇ ಬ್ಯಾಂಕ್‌ಗಳು, ಸಹಕಾರ ಸಂಘಗಳು ನೀಡದ ಸೇವೆಗಳನ್ನು ಗ್ರಾಹಕರ ಮನೆಬಾಗಿಲಿನಲ್ಲಿ ಸಿಗುವಂತೆ ಸಂಗಮಮ್ ಸಹಕಾರ ಸಂಘ ನೀಡುವುದಲ್ಲದೆ ಸಣ್ಣ ವ್ಯಾಪಾರಸ್ಥರಿಗೆ ಮತ್ತು ರೈತರಿಗೆ ಹಾಗೂ ಪ್ರಮುಖವಾಗಿ ಮಹಿಳೆಯರಿಗೆ ಸಣ್ಣ ಉಳಿತಾಯ ಮಾಡಲು ಮತ್ತು ಠೇವಣಿಗಳನ್ನು ಇಡಲು ಹಾಗೂ ಸಾಲ ಪಡೆಯಲು ಸಹಕಾರ ನೀಡುತ್ತದೆ ಎಂದು ಕರ್ನಾಟಕ ರಾಜ್ಯ ವಲಯದ ಸಂಗಮಮ್ ಕೋ ಆಪರೇಟೀವ್ ಸೊಸೈಟಿಯ ಸಿ.ಇ.ಓ ಸಿಂಗದೇವನ್ ತಿಳಿಸಿದರು.
ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಎಸ್.ವಿ.ಎಂ.ಕಾಂಪ್ಲೆಕ್ಸ್‌ನಲ್ಲಿ ಭಾರತ ಸರ್ಕಾರದ ಸಹಕಾರಿ ಇಲಾಖೆಯಿಂದ ಅನುಮೋದಿಸಲಾದ ಸಂಗಮಮ್ ಮಹಿಳಾ ವಿವಿಧೋದ್ದೇಶ ಮಿತವ್ಯಯ ಮತ್ತು ಸಾಲ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸೊಸೈಟಿಯು ಕಳೆದ ೨೦ ವರ್ಷಗಳಿಂದ ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಕೋಲಾರ ನಗರದಲ್ಲಿ ನೂತನ ಶಾಖೆಯನ್ನು ಪ್ರಾರಂಭ ಮಾಡುತ್ತಿರುವುದು ಸಂತೋಷ ತಂದಿದೆಯೆಂದರು.
ನಮ್ಮ ಸೊಸೈಟಿಯಲ್ಲಿ ಉಳಿತಾಯ ಖಾತೆ, ದೈನಂದಿನ, ಸಾಪ್ತಾಹಿಕ, ಮಾಸಿಕ ಉಳಿತಾಯ ಖಾತೆ, ಸ್ಥಿರ ಠೇವಣಿ ಯೋಜನೆಗಳು ಹಾಗೂ ಇತರ ಹಲವಾರು ವಿಷೇಶ ಸಾಲ ಯೋಜನೆಗಳು ಇರುವುದಲ್ಲದೆ ಬ್ಯಾಂಕ್ ಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು,
ಇವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಪರಿಷತ್ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಮಾತನಾಡಿ, ಬ್ಯಾಂಕ್‌ಗಳು ಸರಳ ವಿಧಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿದರೆ ಬ್ಯಾಂಕ್ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಹಾಗೂ ಗ್ರಾಹಕರಿಗೂ ಅನುಕೂಲ ಆಗುತ್ತದೆ ಮತ್ತು ಸಾಲ ವಸೂಲಾತಿಯನ್ನು ಸೌಜನ್ಯದಿಂದ ಮಾಡುವಂತೆ ಸಲಹೆ ನೀಡಿದರು.
ಸಂಗಮಮ್ ಕೋ ಆಪರೇಟಿವ್ ಸೊಸೈಟಿಯ ಅಡ್ಮಿನ್ ಮ್ಯಾನೇಜರ್ ಸುನಿತಾ ಕೆ.ಪಿ. ಮಾತನಾಡಿ ಸೊಸೈಟಿಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳ ಹಾಗೂ ಠೇವಣಿಗಳ ಮತ್ತು ಸಾಲಗಳ ವಿವರಣೆ ನೀಡಿದರಲ್ಲದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೯೭೧೨೧೯೯೫೧ ನ್ನು ಸಂಪರ್ಕ ಮಾಡಿ ಪೂರ್ಣ ವಿವರ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಕೋಲಾರ ವರ್ತಕರ ಸಂಘದ ಅಧ್ಯಕ್ಷರಾದ ಜಿ.ಎಸ್.ಶ್ರೀಧರ್, ಛೇಂಬರ್ ಆಫ್ ಕಾಮರ್ಸ್ ನ ನಾಗಶೇಖರ್, ಸೊಸೈಟಿಯ ಚಿಂತಾಮಣಿ ಶಾಖೆಯ ಮ್ಯಾನೇಜರ್ ಅಂಬರೀಶ್, ಸಂಗಮಮ್ ಸೊಸೈಟಿಯ ಚೌಡಪ್ಪ ಇದ್ದರು.