ರಾಜಿ ಸಂಧಾನದ ಮೂಲಕ ಶೀಘ್ರ ನ್ಯಾಯ ಪಡೆಯಿರಿ
ಕೋಲಾರ,ಜು,೧೫- ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಾಲ್ಗೊಳ್ಳಿ, ರಾಜೀ ಮೂಲಕ ಶೀಘ್ರ ನ್ಯಾಯ ಪಡೆದುಕೊಳ್ಳಿ, ಸಮಯ,ಹಣ ಉಳಿಸಿ, ಸೌಹಾರ್ದತೆಯ ಜೀವನ ನಿಮ್ಮದಾಗಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎ.ಮಂಜುನಾಥ್ ಉಭಯ ಕಕ್ಷಿದಾರರಿಗೆ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕದಾಲತ್‌ಗೆ ಚಾಲನೆ ನೀಡಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷಕ್ಕೆ ನಾಲ್ಕು ರಾಷ್ಟ್ರೀಯ ಲೋಕ ಅದಾಲತ್ ನಡೆಸುತ್ತಿದ್ದು,ಇದು ಈ ವರ್ಷದ ೨ನೇ ಲೋಕ ಅದಾಲತ್ ಆಗಿದೆ ಎಂದು ತಿಳಿಸಿದರು.
ಕಳೆದ ಮಾ.೧೬ ರಂದು ನಡೆದ ಜನತಾ ನ್ಯಾಯಾಲಯದಲ್ಲಿ ೧೦,೯೬೦ ನ್ಯಾಯಾಲಯದಲ್ಲಿದ್ದ ಪ್ರಕರಣ, ೧೧,೦೧೩ ವ್ಯಾಜ್ಯ ಪೂರ್ವ ಪ್ರಕರಣ ಸೇರಿದಂತೆ ೨೧,೯೭೩ ಪ್ರಕರಣ ರಾಜೀ ಮೂಲಕ ಮುಕ್ತಾಯಗೊಂಡಿದ್ದು, ೩೫,೫೨,೨೪,೭೩೭ ರೂ ಪರಿಹಾರದ ಹಣ ಪಾವತಿಯಾಗಿದೆ ಎಂದು ತಿಳಿಸಿದ ಅವರು, ಈ ಬಾರಿ ಇನ್ನೂ ಹೆಚ್ಚಿನ ಪ್ರಕರಣಗಳು ರಾಜೀ ಮೂಲಕ ಇತ್ಯರ್ಥವಾಗುವ ಆಶಯ ವ್ಯಕ್ತಪಡಿಸಿದರು.
ಕೋಲಾರ ಸೇರಿದಂತೆ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು, ಕೆಜಿಎಫ್ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಲಾಗಿದೆ ಎಂದರು.
ಉಭಯ ಪಕ್ಷಗಾರರು ಹಾಗೂ ಅವರ ವಕೀಲರು ಪೂರ್ವ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಜನಮನ್ನಣೆ ಪಡೆದಿರುವ ಪರ್ಯಾಯ ನ್ಯಾಯ ವಿತರಣೆಯಲ್ಲಿ ಉಭಯ ಪಕ್ಷಗಾರರು ತಮ್ಮ ಪ್ರಕರಣಗಳ ರಾಜಿ ಮಾಡಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇಂದಿನ ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ, ರಾಜಿಯಾಗುವ ಕ್ರಿಮಿನಲ್ ಪ್ರಕರಣ, ಚೆಕ್‌ಬೌನ್ಸ್ ಪ್ರಕರಣ, ಮೋಟಾರ್ ವಾಹನ ಅಪಘಾತ ಪ್ರಕರಣ, ಬ್ಯಾಂಕ್ ವಸೂಲಾತಿ, ಉದ್ಯೋಗ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕಾರ್ಮಿಕರ ವೇತನ ಪ್ರಕರಣ,ವೈವಾಹಿಕ ಕುಟುಂಬ ನ್ಯಾಯಾಲಯದ ವಿಚ್ಚೇದನ ಹೊರತುಪಡಿಸಿದ ಪ್ರಕರಣ, ಗ್ರಾಹಕ ನ್ಯಾಯಾಲಯದ, ವಿದ್ಯುತ್ ಬಿಲ್,ನೀರಿನ ಶುಲ್ಕ, ಪಿಂಚಣಿ ಹೀಗೆ ರಾಜಿಯಾಗತಕ್ಕ ಪ್ರಕರಣಗಳು ರಾಜಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ರಾಷ್ಟ್ರಿಯ ಜನತಾ ನ್ಯಾಯಾಲಯದಿಂದಾಗಿ ಇಬ್ಬರಿಗೂ ಒಪ್ಪಿಗೆಯಾಗುವ ತೀರ್ಮಾನ ಬಾಂಧವ್ಯ ಉಳಿದು ವಿವಾದ ಅಂತ್ಯ, ನ್ಯಾಯಾಲಯಕ್ಕೆ ಪಾವತಿಸಬೇಕಾದ ಶುಲ್ಕ ಪೂರ್ಣ ಮರುಪಾವತಿ, ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಸಿಗಲಿದೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಮಾತನಾಡಿ, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ನಿರ್ದೇಶನದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದ್ದು, ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಅದಾಲತ್‌ನಿಂದಾಗಿ ಶೀಘ್ರ ನ್ಯಾಯ ನಿರ್ಣಯ, ವಿವಾದ ಅಂತ್ಯ, ಉತ್ತಮ ಬಾಂಧವ್ಯ ಉಳಿಯಲು ಕಾರಣವಾಗಲಿದೆ, ಸಮಯ, ಹಣ ಉಳಿಯುವುದರಿಂದ ಅಲೆದಾಟ ತಪ್ಪಿ, ಉತ್ತಮ ಜೀವನ ನಡೆಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ, ನಿರ್ಮಲಾದೇವಿ, ಪಿ.ಕೆ.ದಿವ್ಯಾ, ಕೆ.ಬಿ.ಪ್ರಸಾದ್, ಶಕುಂತಲ, ಆರ್.ನಟೇಶ್, ರೆಹಾನಾ ಸುಲ್ತಾನ, ಶ್ರೀನಿವಾಸಪಾಟೀಲ್, ಚೇತನ ಆರಿಕಟ್ಟಿ, ಪಿ.ಮದನ್, ಜಿ.ಹರ್ಷ, ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಕಾರ್ಯದರ್ಶಿ ಎನ್.ಬೈರಾರೆಡ್ಡಿ, ಎಸ್‌ಬಿಐ ಪ್ರಾದೇಶಿಕ ಅಧಿಕಾರಿ ಸೋಮಯ್ಯ ಮತ್ತಿತರರಿದ್ದರು.