ಸರ್ಕಾರಿ ಕಾರ್ಯಕ್ರಮ ಕಾರ್ಯರೂಪಕ್ಕೆ ತನ್ನಿ: ಶಾಸಕ
ಮಾಲೂರು.ಜು.೧೫- ತಾಲೂಕಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ನಿಮ್ಮ ಪರವಾಗಿ ನಿಲ್ಲಲಿದೆ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಕಾರ್ಯರೂಪಕ್ಕೆ ತರಲು ಇಲಾಖೆ ವತಿಯಿಂದ ನೀಡುತ್ತಿರುವ ಸ್ಮಾರ್ಟ್ ಫೋನ್‌ಗಳನ್ನು ಬಳಸಿಕೊಂಡು ಸರ್ಕಾರಿ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಪುರಸಭೆಯ ಆವರಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಶಿಶು ಅಭಿವೃದ್ಧಿ ಯೋಜನೆ ಮಾಲೂರು ವತಿಯಿಂದ ಪೋಷಣೆ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ತೂಕದ ಸಾಧನ ಮತ್ತು ಮೆಡಿಸನ್ ಕಿಟ್ ಹಾಗೂ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಪಾಸ್ ಬುಕ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದ ಮುಖ್ಯ ಅಂಗವಾದ ಶಾಸಕಾಂಗ ಕಾರ್ಯಕ್ರಮಗಳು ಯೋಜನೆಗಳು ರೂಪಿಸಿದರೆ ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳ ಜವಾಬ್ದಾರಿ ಅತ್ಯಂತ ಮಹತ್ವವಾದದ್ದು, ಈ ನಿಟ್ಟಿನಲ್ಲಿ ತಳಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಿ ಪೋಷಣೆ ಮಾಡುವ ಜವಾಬ್ದಾರಿಯ ಜೊತೆಗೆ ಸರ್ಕಾರ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಪ್ರಚಾರ ಹಾಗೂ ಕಾರ್ಯರೂಪಕ್ಕೆ ಬಂದಿರುವ ಅಂಕಿ ಅಂಶಗಳ ಮಾಹಿತಿ ಗರ್ಭಿಣಿ, ಬಾಣಂತಿಯರಿಗೆ ಇಲಾಖೆಗಳಿಂದ ಬರುವ ಪೌಷ್ಟಿಕಾಂಶಗಳು ಆಹಾರ ಪದಾರ್ಥಗಳನ್ನು ಒದಗಿಸಲು ಸರ್ಕಾರ ಕೋಟ್ಯಂತರ ರೂಗಳು ಖರ್ಚು ಮಾಡುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಬಾಣಂತಿ ಗರ್ಭಿಣಿಯರಿಗೆ ಮಕ್ಕಳಿಗೆ ಸರ್ಕಾರ ನೀಡುವ ಪೋಷಕಾಂಶಗಳು ಹಾಗೂ ಸವಲತ್ತುಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಜೊತೆಗೆ ಸರ್ಕಾರದಿಂದ ಇಲಾಖೆಗೆ ಕೇಳುವ ಮಾಹಿತಿಯನ್ನು ಒದಗಿಸುತ್ತಾರೆ.
ಸರ್ಕಾರಿ ಕಾರ್ಯಕ್ರಮಗಳು ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಇಲಾಖೆಯು ಸ್ಮಾರ್ಟ್ ಫೋನ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸುತ್ತಿದ್ದು, ಸರ್ಕಾರ ಕೇಳುವ ದಾಖಲೆಗಳು ಅಂಕಿ ಅಂಶಗಳು ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು, ಯಾವುದೇ ಕಾರ್ಯಕ್ರಮಕ್ಕೂ ಅಂಗನವಾಡಿ ಕಾರ್ಯಕರ್ತೆಯರೇ ಹೆಚ್ಚಿನ ಜವಾಬ್ದಾರಿ ವಹಿಸಿ ಭಾಗವಹಿಸುತ್ತಾರೆ. ತಾಲೂಕಿನಲ್ಲಿ ನಿವೇಶನ ಹಾಗೂ ಸ್ವಂತ ಕಟ್ಟಡ ಇಲ್ಲದ ಕಡೆ ಗುರುತಿಸಿ ನಿವೇಶನ ನೀಡುವುದರ ಜೊತೆಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು.
ತಾಲೂಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಇಲ್ಲವಾದಲ್ಲಿ ಟೀಕೆ ಟಿಪ್ಪಣಿಗಳು ಬರುತ್ತವೆ, ತಾಲೂಕು ಆಡಳಿತ ಜನಸಾಮಾನ್ಯರ ಪರವಾಗಿ ಆಡಳಿತ ನೀಡಬೇಕು ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡದಿದ್ದರೆ. ವರ್ಗಾವಣೆ ಮಾಡಿಸಿಕೊಂಡು ಹೋಗಬಹು ದಾಗಿದೆ. ಭ್ರಷ್ಟಾಚಾರ ಮಾಡುವ ಅಧಿಕಾರಿಗಳು ನಮಗೆ ಅಗತ್ಯವಿಲ್ಲ ಜನರು ನಂಬಿಕೆ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನಪರ ಆಡಳಿತ ನೀಡಲು ಅಧಿಕಾರಿಗಳು ಜನಸಾಮಾನ್ಯರಿಗೆ ಸ್ಪಂದಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ್ಪ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರಗಳ ನಿರ್ವಹಣೆ ಜೊತೆಗೆ ಸರ್ಕಾರ ಕೇಳುವ ದಾಖಲೆಗಳನ್ನು ಅಂಕಿ ಅಂಶಗಳನ್ನು ಸಮರ್ಪಕವಾಗಿ ತಲುಪಿಸಲು ಸರ್ಕಾರವು ಸ್ಮಾರ್ಟ್ ಫೋನ್‌ಗಳ ವಿತರಣೆ ಮಾಡುತ್ತಿದ್ದು, ಈ ಹಿಂದೆ ಡೇಟಾ ಮ್ಯಾನುಯೆಲ್ ಮೂಲಕ ಮಾಡಲಾಗುತ್ತಿತ್ತು, ಪ್ರಸ್ತುತ ಮೊಬೈಲ್ ಡೇಟಾ ಮೂಲಕ ಸರ್ಕಾರಿ ಯೋಜನೆಗಳು ಕಾರ್ಯಕ್ರಮಗಳನ್ನು ಅಂಕಿ ಅಂಶಗಳನ್ನು ಆಗಿಂದಾಗೆ ನೀಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ ಮುನೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ನಿರೂಪಣಾಧಿಕಾರಿ ವಂಶಿಕೃಷ್ಣ, ತಾಲೂಕು ಆರೋಗ್ಯ ಅಧಿಕಾರಿ ರಮೇಶ್ ಬಾಬು, ಪುರಸಭಾ ಸದಸ್ಯ ಇಮ್ತಿಯಾಜ್ ಖಾನ್, ಮುರುಳಿಧರ್, ಮುಖಂಡರಾದ ಬಿ.ಆರ್.ಶ್ರೀನಿವಾಸ್, ಹನುಮಂತರೆಡ್ಡಿ, ಶೈಲಜಾ, ತನ್ವೀರ್ ಅಹ್ಮದ್, ನವೀನ್, ಇನ್ನಿತರರು ಹಾಜರಿದ್ದರು.