ಬಡ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಪರಿಕರಗಳ ವಿತರಣೆ
ಬಂಗಾರಪೇಟೆ.ಜು.೧೫- ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಕಾರ್ಮಿಕ ಮತ್ತು ಪರಿಸರ ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್. ಕೇಶವಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಶಾಲೆಗಳಾದ ರೆಡ್ಡಿಹಳ್ಳಿ, ಇಂದಿರಾನಗರ ಒಳಗೊಂಡಂತೆ ೮ಸರ್ಕಾರಿ ಶಾಲೆಗಳಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಅವರ ಜನ್ಮದಿನದ ಪ್ರಯುಕ್ತ ಉಚಿತ ನೋಟ್ ಪುಸ್ತಕ ಮತ್ತು ಅಗತ್ಯವಿರುವ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಇಂದು ಬಹುತೇಕ ಬಡ ವಿದ್ಯಾರ್ಥಿಗಳು ಸೌಲಭ್ಯಗಳಿಲ್ಲದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಅದಕ್ಕೆ ಪೂರಕವೆಂಬಂತೆ ನಾವು ಸಹ ಸಣ್ಣ ಪುಟ್ಟ ಅಳಿಲು ಸೇವೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಬೇಕು ಎಂದರು.
ಶಿಕ್ಷಣ ಮತ್ತು ವ್ಯಕ್ತಿತ್ವದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ, ಈ ಹಿನ್ನಲೆಯಲ್ಲಿ ವಿದ್ಯಾಭ್ಯಾಸದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಬರೆಯಲು ಪರಿಕರಗಳು ಅಗತ್ಯ. ಆದ್ದರಿಂದ ನಾವು ಇಂದು ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ಒದಗಿಸುತ್ತೇವೆ. ವಿದ್ಯಾರ್ಥಿಗಳು ಓದುವ ಕಡೆಗೆ ಹೆಚ್ಚಿನ ಗಮನವನ್ನು ಕೊಟ್ಟು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಂಗಾರಪೇಟೆ ತಾಲ್ಲೂಕು ಸಂಚಾಲಕ ಶ್ರೀನಿವಾಸ್, ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌಮ್ಯ, ತಾಲ್ಲೂಕು ಅಲ್ಪಸಂಖ್ಯಾತ ಮೋರ್ಚಾ ಹಾಗೂ ವಕ್ಬ ಸಮಿತಿಯ ಸದಸ್ಯ ಸೈಯದ್ ಮೆಹಬೂಬ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಶಿವರಾಜ್, ದೇಶಿಹಳ್ಳಿ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರುಗಳಾದ ಉಷಾ ಮತ್ತು ಪ್ರೇಮ ಇನ್ನು ಅನೇಕರು ಭಾಗವಹಿಸಿದ್ದರು.