ಕವಿ ಲಕ್ಕೂರು ಆನಂದ ಅಪ್ರತಿಮ ಸಾಹಿತ್ಯ ಪ್ರತಿಭೆ : ಪ್ರೊ. ದಯಾನಂದ ಅಗಸರ
ಕಲಬುರಗಿ:ಜು.14: ಸಮಾನತೆಯ ಸಮಾಜ ಚಿಂತನೆಯನ್ನು ಬೆಳೆಸಿಕೊಂಡಿದ್ದ ಕವಿ ಲಕ್ಕೂರು ಆನಂದ ಅವರೊಬ್ಬ ಅಪ್ರತಿಮ ಸಾಹಿತ್ಯ ಪ್ರತಿಭೆ. ಅವರು ನಮ್ಮೊಂದಿಗಿಲ್ಲದ ನೆನೆಪು ನೋವು ತಂದಿದೆ. ಸಾಹಿತ್ಯ ಮತ್ತು ಕಾವ್ಯ ಚಿಂತನೆಗಳ ಮೂಲಕ ಸಮಾಜದಲ್ಲಿ ಬಿತ್ತಿ ಬೆಳಕು ನೀಡಿ ಅಗಲಿದ್ದಾರೆ. ಅವರ ಮೌಲಿಕ ಕಾವ್ಯ ಸಂದೇಶಗಳು ಯುವಕರಿಗೆ ಹಾಗೂ ಸಮಾನತೆಯ ಸಮಾಜವನ್ನು ರೂಪಿಸಲು ಪೂರಕವಾಗಿವೆ. ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದ ಎಸ್‍ಸಿ-ಎಸ್‍ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕಲಬುರಗಿ ಸಮುದಾಯ ಇವುಗಳ ಸಹಯೋಗದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ‘ಕವಿ ಲಕ್ಕೂರು ಆನಂದ ನೆನಪು ಹಾಗೂ ಸಮಾಕಾಲೀನ ಸಾಮಾಜಿಕ ಹೊಣೆಗಾರಿಕೆ-ಚಿಂತನೆ ಮತ್ತು ಲಕ್ಕೂರು ಆನಂದರ ಪುಸ್ತಕ ಬಿಡುಗಡೆ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅತ್ಯುತ್ತಮ ವೈಚಾರಿಕ ಜ್ಞಾನ ಮತ್ತು ವಿಭಿನ್ನ ಆಲೋಚನೆ ಕ್ರಮವನ್ನು ಮೈಗುಡಿಸಿಕೊಂಡಿದ್ದರು ಎಂಬುದಕ್ಕೆ ಅವರು ಬರೆದುಕೊಂಡಿರುವ “ನನ್ನನ್ನು ಈಗಲಾದರು ಕ್ಷಮಿಸುಬಿಡು ದೇವರೆ, ಇವರನ್ನೆಲ್ಲಾ ಮುಟ್ಟಿ ಮುಟ್ಟಿ ಅಪವಿತ್ರವಾಗುವುದಕ್ಕಿಂತ ಮುಟ್ಟಿಸಿಕೊಳ್ಳದೆ ಪವಿತ್ರವಾಗಿರಬೇಕೆಂದುಕೊಂಡಿದ್ದೇನೆ” ಎಂಬುದು ಅವರದ ಅಕ್ಷರದ ಅರ್ಥಗರ್ಭಿತ ಸಾಲುಗಳು ಸಾಕ್ಷಿಯಾಗಿವೆ. ಅವರ ಅಗಲಿಕೆ ನೆನೆಪು ನಮಗೆ ಕಾಡದಂತೆ ಸಾಹಿತ್ಯ ರಚಿಸಿ ಜ್ಞಾನದ ಬೆಳಕನ್ನು ಸಮಾಜದಲ್ಲಿ ಬಿತ್ತು ಹೋಗಿರುವುದು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯಾಗಿದೆ. ಅವರ ಜ್ಞಾನ ಸಾಹಿತ್ಯ ಸಮುದಾಯವನ್ನು ಎಚ್ಚರಿಸುತ್ತವೆ. ಇಂತಹ ಕ್ರಿಯಾಶೀಲ ಪ್ರತಿಭೆ ನಮ್ಮೊಂದಿಗೆ ಇಲ್ಲವೆಂಬುದನ್ನು ನೆನಪಿಸಿಕೊಳ್ಳಲು ಕಷ್ಟವಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಯ ಪ್ರಾಧ್ಯಾಪಕರು ಹಾಗೂ ಹಿರಿಯ ಸಾಹಿತಿ ಮಹಾದೇವ ಶಂಕನಪುರ ಮಾತನಾಡಿ ಸಾಹಿತ್ಯ ವಲಯದ ಸಂಪರ್ಕ ಬೆಳೆಸಿಕೊಂಡಿದ್ದ ಕವಿ ಲಕ್ಕೂರು ಆನಂದ ಜಾಗತಿಕ ಸಾಹಿತ್ಯ ಚಿಂತನೆಯನ್ನು ಕರಗತ ಮಾಡಿಕೊಂಡಿದ್ದರು. ಅವರೇ ಸ್ವತಃ ರಚಿಸಿದ ಸಾಹಿತ್ಯ, ಕಾವ್ಯ ರಚನೆ, ತೆಲಗು ಮತ್ತು ಕನ್ನಡ ಸಾಹಿತ್ಯ ಅನುವಾದ ಪ್ರಾವೀಣ್ಯತೆಯಿಂದ ಕನ್ನಡ ಮತ್ತು ತೆಲಗು ಸಾಹಿತ್ಯ ಲೋಕ ಶ್ರೀಮಂತಗೊಂಡಿದೆ. ಸದಾ ಸಾಹಿತ್ಯ ಚಟುವಟಿಕೆಯಲ್ಲಿದ್ದ ಲಕ್ಕೂರು ಆನಂದ ಅವರ ಕಾವ್ಯ ನೆಲೆ, ಮಾದರಿ, ರಚನೆಯ ವಿದ್ವತ್ತು ಮತ್ತು ಪ್ರೇರಣೆ ನಿಜಕ್ಕೂ ನಿಗೂಢ ಎನಿಸುತ್ತದೆ. ಬರವಣಿಗೆ ತುಡಿತದಿಂದ 33ನೇ ವಯಸ್ಸಿಗೆ ಐದು ಮೌಲಿಕ ಕವಿತೆ ಸಂಕಲನ ರಚಿಸಿದ್ದಾರೆ. ಸಾಹಿತ್ಯ ಮತ್ತು ಸಾಹಿತಿಗಳನ್ನು ಹುಡುಕಿಕೊಂಡು ಹೋಗುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಅವರೊಂದಿಗಿನ ಒಡನಾಟದ ಬದುಕನ್ನು ಆಶಯ ನುಡಿಯಲ್ಲಿ ಹಂಚಿಕೊಂಡರು.
ಜಾತಿಯತೆ ಮತ್ತು ಅಹಿಂಸೆ ಹಿನ್ನೆಲೆಯಲ್ಲಿ ಶಿಕ್ಷಣ ಪಡೆದು ಬರವಣಿಗೆ ಮೂಲಕ ಪರಿಹಾರ ಸಾಧ್ಯತೆಗಳ ಬಗೆ ಗಂಭೀರ ಚಿಂತನೆ ಅವರಿಗಿತ್ತು ಎಂಬುದಕ್ಕೆ ‘ಊರಿನ ಏಕಾಂತ ದೀಪ’ ಕವನ ಸಂಕಲನ ಹೆಚ್ಚು ಮಹತ್ವದಾಗಿದೆ. ಒಬ್ಬ ಲೇಖಕ ಅಥವಾ ಕವಿ ಅವರು ಬರೆದಂತೆ ಬದುಕಲು ಸಾಧ್ಯವೇ? ಬರಹವೇ ಬೇರೆ, ಬದುಕೇ ಬೇರೆ ಯಾಕಿರಬಾರದು? ಬದುಕು ಬೇರೆಯದ್ದೇ ಆಗಿದ್ದು, ಚಿಂತನೆಗಳ ಆಶಯವೇ ಬೇರೆ ಇರಬಾರದೆ ಎಂಬ ಪ್ರಶ್ನೆ ಇಂದು ಎದುರಾಗಿದೆ. ಆದರಿಂದ ಜೀವನ ನೀತಿ ಮತ್ತು ಆದರ್ಶ ಸಾಹಿತ್ಯ ರಚನೆ ಮುಖ್ಯವಾಗಿದೆ. ಕೋಲಾರದ ಸಾಹಿತ್ಯ ಸಮ್ಮೇಳನದಲ್ಲಿ ಜೊತೆಗಿದ್ದ ಆನಂದ ಅವರು ಜಗತ್ತಿನ ಸಾಹಿತ್ಯ ಮತ್ತು ಚಿಂತಕರ ವಿಚಾರಗಳ ಕುರಿತು ನನ್ನೊಂದಿಗೆ ಚರ್ಚಿಸಿದ್ದರು ಎಂದು ಸ್ಮರಿಸಿಕೊಂಡರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಹೆಚ್. ಟಿ. ಪೆÇೀತೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋಲಾರ ಜಿಲ್ಲೆಯ ಲಕ್ಕೂರು ಗ್ರಾಮದ ಬಡತನದ ಕುಟುಂಬದಲ್ಲಿ ಬೆಳೆದು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧನೆ ಮಾಡುತ್ತಿದ್ದ ಕವಿ ಲಕ್ಕೂರು ಆನಂದ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಯುವ ಸಾಹಿತ್ಯ ಪ್ರಶಸ್ತಿ ಪಡೆದಿದ್ದರು. ಇಂತಹ ಪ್ರತಿಭೆಗೆ ಸೂಕ್ತ ಉದ್ಯೋಗ ಸಿಗಲಿಲ್ಲ. ಅರ್ಹತೆಯುಳ್ಳ ಇಂತಹ ಸಾವಿರಾರು ಪ್ರತಿಭೆಗಳು ಜೀವನದಲ್ಲಿ ಜಿಗುಪ್ಸೆ ಪಡುವಂತಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ನೀಡಿದ ಅವಕಾಶದಿಂದ ಅಧಿಕಾರ, ಉದ್ಯೋಗ ಪಡೆದಿರುವವರು ಮಾತನಾಡುತ್ತಿಲ್ಲ. ವಿದ್ಯಾವಂತ ಸಮುದಾಯ ಒಗ್ಗಟ್ಟಿನಿಂದ ಅವಕಾಶ ಮತ್ತು ಸೌಲಭ್ಯಗಳನ್ನು ಪಡೆಯಲು ಪ್ರಶ್ನಿಸುವ ದೈರ್ಯವನ್ನು ಬೆಳೆಸಿಕೊಳ್ಳಬೇಕು. ಅನ್ಯಾಯ ಮತ್ತು ತುಳಿಯುತ್ತಿರುವ ವ್ಯವಸ್ಥೆಯನ್ನು ಯುವಕರು ಅರ್ಥಮಾಡಿಕೊಂಡು ಚಳುವಳಿ ಮತ್ತು ಹೋರಾಟದ ನೆಲೆಯಲ್ಲಿ ಧ್ವನಿ ಮಾಡಬೇಕಿದೆ. ಒಂದು ಕಡೆ ವಯೋಮಾನ ಮೀರುತ್ತಿರುವ ಪದವಿದರರು ಇಂದು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಾತಿಯತೆ ಎಲ್ಲೇ ಮೀರಿ ಬೆಳೆದಿದೆ. ಪ್ರಶ್ನೆ ಮಾಡುವ ಹಕ್ಕಿದ್ದರು ಸಹ ಯುವ ಜನಾಂಗ ಪ್ರಶ್ನಿಸದಿರುವುದರಿಂದಲೇ ಅವ್ಯವಸ್ಥೆ ಬೆಳೆಯುತ್ತಿದೆ ಎಂದರು.
ರಾಜ್ಯ ದಲಿತ ಸಂಘಟನೆ ಸಮಿತಿಯ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ ಬಹುತೇಕ ವಿದ್ಯಾವಂತರು ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಸನ್ಮಾರ್ಗ ತೋರಿಸಬೇಕಾದ ಪ್ರಜ್ಞಾವಂತರು ಇಂದು ಸುಮ್ಮನಿರುವುದು ಸರಿಯಲ್ಲ. ಇಂತಹ ಎಷ್ಟೋ ಜನರು ಸಣ್ಣ ವಯಸ್ಸಿನಲ್ಲಿ ಅಗಲುತ್ತಿರುವುದು ನಿಜಕ್ಕೂ ವಿಷಾದಕರ ಎಂದರು.
ಸಾಹಿತಿ ಪ್ರೊ. ಆರ್. ಕೆ. ಹುಡುಗಿ ಮಾತನಾಡಿ ಯುವಕರು ವ್ಯಸನಗಳಿಗೆ ಬಲಿಯಾಗದೇ ಆದರ್ಶ ಗುಣಗಳನ್ನು ಪಾಲಿಸಬೇಕು. ಯಾವುದೇ ವ್ಯಸನಗಳಿಗೆ ದಾಸರಾಗದೆ ಗುರಿ ಮತ್ತು ಸಾಧಿಸುವ ಛಲ ರೂಢಿಸಿಕೊಳ್ಳಬೇಕು. ಯುವ ವಿದ್ಯಾವಂತ ಸಮುದಾಯ ಹಾಳಾಗುತ್ತಿರುವದನ್ನು ಕೇವಲ ನೋಡದೆ ಕರೆದು ಬುದ್ದಿ ಹೇಳುವ ಮೂಲಕ ಸಕಾರಾತ್ಮಕ ಗುಣಗಳನ್ನು ಬೆಳೆಸುವದನ್ನು ಮಾಡಬೇಕಿದೆ ಎಂದರು.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಅಪ್ಪಗೆರೆ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಬಡತನದ ಕುಟುಂಬದ ವ್ಯಕ್ತಿ ಅಲ್ಪ ಅವಧಿಯಲ್ಲಿ ನಮ್ಮನೆಲ್ಲ ಅಗಲಿದ್ದು ತುಂಬಾ ದುಖಃಕರ ವಿಷಯ. ಆದರೂ ಸಾಹಿತ್ಯ ಮತ್ತು ಕಾವ್ಯ ರಚನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕವಿ ಲಕ್ಕೂರು ಆನಂದ ದಲಿತ ಕವಿ ಸಿದ್ದಲಿಂಗಯ್ಯ, ಎಲ್. ಹನುಮಂತಯ್ಯ ಮತ್ತು ಬಿ. ಸಿದ್ದಯ್ಯ, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ ಮತ್ತು ದೇವನೂರು ಮಹದೇವ ಅವರು ತಮ್ಮ ಕಾವ್ಯ ಚಿಂತನದಲ್ಲಿ ನವಿಲನ್ನು ಒಂದು ಪ್ರತಿಮೆಯಾಗಿ ಕಾವ್ಯ ಸಾಹಿತ್ಯಕ್ಕೆ ಕಸುವು ತುಂಬಲು ಒಬ್ಬೊಬ್ಬರು ಒಂದು ಪ್ರತಿಮೆಯಾಗಿ ಬಳಸಿಕೊಂಡಿದ್ದಾರೆ. ಅವರಂತೆ ಕವಿ ಲಕ್ಕೂರು ಆನಂದ ಅವರು ಸಹ ಬಿನ್ನ ಸಂಕೇತವಾಗಿ ನವಿಲನ್ನು ಸಾಹಿತ್ಯ ಶ್ರೀಮಂತಿಕೆಗೆ ಬಳಸಿಕೊಂಡು ಬೆಳೆದರು. ಅವರ ನೆನೆಪು ಎಲ್ಲ ವರ್ಗದ ಸಾಹಿತಿಗಳನ್ನು ಕಾಡುವುದು ನಿಜ. ಅವರ ‘ದೇವರಿಗೊಂದು ಅರ್ಜಿ’ ಕಾವ್ಯ ಸಂಕಲನ ‘ಬಡವಾಡೇಗಳಿಲ್ಲದ ರಸೀದಿ’ ದಲಿತರ ಒಟ್ಟು ನಿಕೃಷ್ಟ ಬದುಕಿನ ಬಗ್ಗೆ ಬಹಳ ಕಾಳಜಿಯಿಂದ ಕಟ್ಟಿ ಕಾವ್ಯ ಎಂದರು.
ಕಾರ್ಯಕ್ರಮದಲ್ಲಿ ಕವಿ ಲಕ್ಕೂರು ಆನಂದ ಅವರ ತಾಯಿ ಮುನಿಯಮ್ಮ ಲಕ್ಕೂರು, ಸಹೋದರ ನಾಗರಾಜ ಲಕ್ಕೂರು ಹಾಗೂ ಸಂಬಂಧಿಗಳು, ಮರಿಯಪ್ಪನಹಳ್ಳಿ ಅರ್ಜುನ್ ಭದ್ರೆ, ಸಾಹಿತ್ಯ ಬಳಗ, ಚಿಂತಕರು ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಸಂತೋಷಕಂಬಾರ ಅತಿಥಿಗಳನ್ನು ಸ್ವಾಗತಿಸಿದರು. ಅಣವೀರಗೌಡ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ಕು. ಬೀಮಾಬಾಯಿ ವಂದಿಸಿದರು.
ನನ್ನ ಅಣ್ಣ ಒದು ಮತ್ತು ಬರವಣಿಗೆಯ ತುಡಿತವನ್ನು ಬಹಳ ಬೆಳೆಸಿಕೊಂಡಿದ್ದರು. ರಾತ್ರಿ ಮೂರು ಗಂಟೆವರೆಗೂ ಬರೆದು ಮತ್ತೆ ಬೆಳಿಗಿನ ಐದು ಗಂಟೆಗೆದ್ದು ಮತ್ತೆ ಸಾಹಿತ್ಯ ಬರೆಯುತ್ತಿದ್ದರು. ಏಕೆ ಇಷ್ಟು ನಿದ್ದೆಗೆಡುತ್ತಿ ಅಂತ ನಾ ಕೇಳಿದರೆ, ನೋಡು ನನ್ನ ಜೀವನದಲ್ಲಿ ಏನು ಬೇಕಾದರೂ ತಗೊ ಆದರೆ, ನನ್ನಿಂದ ಅಕ್ಷರ ಕಿತ್ತುಕೊಳ್ಳಬೇಡ ಎನ್ನುತ್ತಿದ್ದರು ಎಂದು ಅಣ್ಣನ ಅಗಲಿಕೆ ನೆನೆದು ದುಖಃತಪ್ತ ಭಾವುಕರಾದರು. ಆ ಸನ್ನವೇಶ ಎಲ್ಲರನ್ನೂ ಮೌನಮುಗ್ಧಗೊಳಿಸಿತು.
ನಾಗರಾಜ ಲಕ್ಕೂರು
ಕವಿ ಲಕ್ಕೂರು ಆನಂದ ಅವರ ಸಹೋದರ