ಸೋಲಿಸುವ ವಿಚಾರಗಳಿಂದಲೇ ಗೆಲುವು ಪಡೆಯಿರಿ
ಸಂಜೆವಾಣಿ ವಾರ್ತೆ    
ಶಿವಮೊಗ್ಗ.ಜು.೧೫ : ನಿರಂತರ ಶ್ರದ್ದೆಯುಳ್ಳ ಕಲಿಕೆಯೊಂದಿಗೆ ನಿಮ್ಮನ್ನು ಸೋಲಿಸುವ ವಿಚಾರಗಳಿಂದಲೇ ಗೆಲುವು ಪಡೆಯಲು ಪ್ರಯತ್ನಿಸಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಕರೆ ನೀಡಿದರು.ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್‌ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಓದು, ಅರಿವು, ಬರಹ ಕಮ್ಮಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ನಿಮ್ಮೊಳಗಿನ ಅರಿವು ವಿಸ್ತಾರವಾಗುತ್ತಿದ್ದಂತೆ ಅಕ್ಷರ ಪ್ರಜ್ಞೆ ಆಳವಾಗಿ ಗಟ್ಟಿಯಾಗಿ ನಿಲ್ಲುವಂತಾಗಬೇಕು. ಅಂದಿನವರಿಗೆ ಸಿಗದ ಅವಕಾಶಗಳು ನಿಮಗೆ ಸಿಗುತ್ತಿದ್ದು, ಪೂರಕವಾಗಿ ಬಳಸಿಕೊಳ್ಳಬೇಕು. ಇಂದಿನ ವ್ಯವಸ್ಥೆಯನ್ನು ಯಾವ ದೇವರೂ ವರ ಕೊಟ್ಟದ್ದಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ಪ್ರಜಾಪ್ರಭುತ್ವ ದೊರೆಯಿತು. ಅದರ ಫಲ ಸಂವಿಧಾನ ದೊರೆಯಿತು. ನಿಮ್ಮ ಸಾಮರ್ಥ್ಯಕ್ಕೆ  ಅಕ್ಷರದ ಮೂಲಕ ಫಲವನ್ನು ಪಡೆಯುವಂತಾಗಬೇಕು.ನಿಮ್ಮ ತಂದೆ, ತಾಯಿ ಓದುವ ಅಭ್ಯಾಸ ಮಾಡಲಿಲ್ಲ. ಶ್ರಮದ ಕೆಲಸದಷ್ಟು ಸುಲಭ ಓದುವುದಾಗಿರಲಿಲ್ಲ. ನೀವು ನಿರಂತರ ಶ್ರದ್ದೆಯಿಂದ ಕಲಿಯಬೇಕು. ಯಾವುದು ಇದುವರೆಗೆ ನಿಮ್ಮನ್ನು ಸೋಲಿಸಿತ್ತೋ ಅದನ್ನ ನೀವು ಗೆಲ್ಲಬೇಕು. ನಮ್ಮ ಕೆಳಸ್ಥರದ ಜನರಿಗೆ ಶಿಕ್ಷಣ ವಂಚಿಸಿದ್ದರಿಂದ ನಮ್ಮ ದೇಶ ಆಕ್ರಮಣಕಾರರಿಗೆ ಬಲಿಯಾಯಿತು. ಅಂದೇ ಓದು ಬರಹ ಕಲಿಸಿದ್ದರೆ ಬೇರೆಯವರ ಹುನ್ನಾರಗಳು ಅರ್ಥವಾಗುತ್ತಿದ್ದವು. ಅಂತರವನ್ನು ಹೊಡೆದು ಓಡಿಸುತ್ತಿದ್ದರು ಎಂದು ವಿವರಿಸಿದರು.
 ಚೆನ್ನಾಗಿ ಕಲಿಯಿರಿ, ಅದು ನಿಮ್ಮ ವ್ಯಕ್ತಿತ್ವವನ್ನು ಬದಲಿಸುತ್ತದೆ. ನಿಮ್ಮ ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಕನ್ನಡ ಸಾಹಿತ್ಯ ಓದು, ಅರಿವು ಎಷ್ಟು ಮುಖ್ಯವೋ ನೀವು ಬರೆಯುವುದನ್ಮು ಕರಗತಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಕುವೆಂಪು ವಿ. ವಿ. ಕುಲಸಚಿವರಾದ ಎ.ಎಲ್. ಮಂಜುನಾಥ ಧನ್ವಂತರಿ ಗೋಡೆ ಬರಹ ಪತ್ರಿಕೆ ಲೋಕಾರ್ಪಣೆ ಮಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ಹತ್ತು ಹದಿನೈದು ವರ್ಷ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದರೂ  ಓದಲು, ಬರೆಯಲು, ಮಾತನಾಡುವ ಸಾಮರ್ಥ್ಯ ಪಡೆದುಕೊಂಡಿಲ್ಲ ಎಂದರೆ ನಾವೆಲ್ಲರೂ ಯೋಚಿಸಬೇಕಾಗಿದೆ. ಇವತ್ತು ನಮ್ಮ ಜಿಲ್ಲೆಯ ಶಾಲಾ, ಕಾಲೇಜು ಅಂಗಳಕ್ಕೆ ಹೋಗಿ ಇಂತಹ ಕಮ್ಮಟಗಳನ್ನು ಸಂಘಟಿಸುತ್ತಿದ್ದೇವೆ. ಮುಖ್ಯವಾಗಿ ಶಿಕ್ಷಣ ಗುಣಮಟ್ಟಕ್ಕೆ ಉತ್ತೇಜನ ನೀಡುವುದು. ವಿದ್ಯಾರ್ಥಿಗಳಲ್ಲಿ ಹೊಸ ಸಂಚಲನ ಉಂಟುಮಾಡುವ ಪ್ರಯತ್ನ ಮಾಡಿದ್ದೇವೆ ಎಂದರು.ಕಾಲೇಜು ಪ್ರಾಂಶುಪಾಲರಾದ ಡಾ. ಎಚ್. ಎಂ. ಧರ್ಮೇಗೌಡರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ದಾಳೇಗೌಡರು, ಕಸಾಪ ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ ಉಪಸ್ಥಿತರಿದ್ದರು. ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಯಶಂಕರ್ ಹಲಗೂರು ಅವರು ಕನ್ನಡ ಪಠ್ಯದ ಬಹುಮುಖಿ ಮಹತ್ವ ಕುರಿತು ಮಾತನಾಡಿದರು. ಸಾಹಿತಿಗಳಾದ ಡಾ. ಕೇಶವಶರ್ಮ ಅವರು ಕವನ ಓದು, ಅರಿವು, ಬರಹದ ಅಭಿವ್ಯಕ್ತಿಯ ಕುರಿತು ಮಾರ್ಗದರ್ಶನ ಮಾಡಿದರು. ಉಪನ್ಯಾಸಕರಾದ ಡಾ. ಜಿ.ಆರ್. ಲವ ಅವರು ಕಥೆ, ಓದು ಅರಿವು, ಬರಹದ ಸಾಧ್ಯತೆ ಕುರಿತು ಮಾಹಿತಿ ನೀಡಿದರು. ಅರ್ಪಿತಾ ಮತ್ತು ಮಾನಸ ತಂಡ ಪ್ರಾರ್ಥಿಸಿ, ಎಸ್. ಸ್ನೇಹಾ ಸ್ವಾಗತಿಸಿ, ಕೆ. ಅನುಷಾ ವಂದಿಸಿ, ರಾಜೇಶ್ ನಾಯ್ಕ ನಿರೂಪಿಸಿದರು.