ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳವು ಮಾಡುತ್ತಿದ್ದ ಭದ್ರಾವತಿಯ ಐವರು ಅರೆಸ್ಟ್!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. ೧೫;  ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಂದ ಚಿನ್ನಾಭರಣ ಅಪಹರಿಸುತ್ತಿದ್ದ ಆರೋಪದ ಮೇರೆಗೆ, ಭದ್ರಾವತಿ ನಗರದ ಐವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ.ಭದ್ರಾವತಿಯ ಹೊಸಮನೆಯ ಹನುಮಂತನಗರ ಬಡಾವಣೆ ನಿವಾಸಿಗಳಾದ ಶಾಂತಿ ಯಾನೆ ಕರ್ಕಿ (31), ಮೀನಾಕ್ಷಿ (38), ಸಾವಿತ್ರಿ ಯಾನೆ ಬಾಬಾ (29), ಸುಶೀಲಮ್ಮ (66) ಹಾಗೂ ಭೋವಿ ಕಾಲೋನಿಯ ನಿವಾಸಿ ದುರ್ಗಾ ಯಾನೆ ಸಣ್ಣ ದುರ್ಗ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 8,13,000 ರೂ. ಮೌಲ್ಯದ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕಳೆದ 29-6-2024 ರಂದು ಶಿವಮೊಗ್ಗದ ಜೆಸಿ ನಗರದ ಮಹಿಳೆಯೋರ್ವರು ದಾವಣಗೆರೆಗೆ ತೆರಳಲು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು ಅಪಹರಿಸಲಾಗಿತ್ತು. ಸದರಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸದರಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಎ ಎಸ್ ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.