ತಾಯಿ ನುಡಿ ಕನ್ನಡ ಭಾಷೆ ಎಂದಿಗೂ ಮರೆಯದಿರಿ
ಭಾಲ್ಕಿ:ಜು.14: ಗಡಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಬಸವತತ್ವ ಪ್ರಚಾರ ಪ್ರಸಾರದ ಜತೆಗೆ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ನಿಜಾಂನ ಆಳ್ವಿಕೆ ಸಂದರ್ಭದಲ್ಲಿ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸಿದ ಶ್ರೇಯಸ್ಸು ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಶನಿವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟದ್ದೇವರ ಕನ್ನಡದ ಮೇಲಿನ ಪ್ರೀತಿ ನನಗೆ ಸದಾಕಾಲ ಪ್ರೇರಕ ಶಕ್ತಿಯಾಗಿ ನಿಲ್ಲುತ್ತದೆ. ಈ ಕಾರಣಕ್ಕಾಗಿಯೇ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸುತ್ತಲೇ ಮೊದಲಿಗೆ ಗಡಿ ಭಾಗದ ಕನ್ನಡದ ಶ್ರೀಮಠಕ್ಕೆ ಭೇಟಿ ನೀಡಿ ಕನ್ನಡದ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದೇನೆ.
ವಿದ್ಯಾರ್ಥಿಗಳು ತಾಯಿ ನುಡಿ ಕನ್ನಡ ಭಾಷೆಯನ್ನು ಎಂದಿಗೂ ಮರೆಯಬಾರದು. ಅನ್ಯ ಭಾಷೆ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಕನ್ನಡವನ್ನು ಮಾತೃ ಭಾಷೆಯನ್ನಾಗಿ ಸ್ವೀಕರಿಸಿ ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದಿ, ಮರಾಠಿ, ತಮಿಳು ಸೇರಿ ವಿವಿಧ ಪ್ರಾದೇಶಿಕ ಭಾಷೆಗಳು ಗಟ್ಟಿಯಾಗಿ ಬೆಳೆಯುತ್ತಿವೆ. ಆದರೆ ನಮ್ಮೆಲ್ಲರ ನಿರಾಸಕ್ತಿ, ಅನ್ಯ ಭಾಷೆಯ ವ್ಯಾಮೋಹದಿಂದ ನಮ್ಮ ಕನ್ನಡ ಭಾಷೆ ಸೊರಗುತ್ತಿದೆ. ಹೀಗಾದರೇ ಮುಂದಿನ ದಿನಗಳಲ್ಲಿ ಸಾವಿರಾರೂ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಯುವ ಪೀಳಿಗೆ ಯಾವುದೇ ಕಾರಣಕ್ಕೂ ಕನ್ನಡವನ್ನು ಮರೆಯಬಾರದು. ಸಮಾಜದಲ್ಲಿ ಎಷ್ಟೇ ಉನ್ನತ ಸ್ಥಾನ ಪಡೆದರೂ ಕೂಡ ನಮ್ಮತನ ಮರೆಯಬಾರದು. ಕನ್ನಡ ಭಾಷೆಯ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಶ್ರೀಮಠದ ಹಿರಿಮೆ, ಗರಿಮೆ ಹೆಚ್ಚಿಸಿದ ಕೀರ್ತಿ ಡಾ.ಚನ್ನಬಸವ ಪಟ್ಟದ್ದೇವರು, ಡಾ.ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಗಡಿಭಾಗವನ್ನು ಕನ್ನಡ ನೆಲದಲ್ಲಿ ಉಳಿಸುವಲ್ಲಿ ಭಾಷೆ ರಕ್ಷಣೆಯಲ್ಲಿ ಪೂಜ್ಯರ ಕೊಡುಗೆ ಶ್ರೇಷ್ಠವೆನಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸಂತೋಷ ಹಾನಗಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕ್ಷೇತ್ರ ಶಿಕ್ಷಣಾಧಿಕಾರಿ ಮನೋಹರ ಹೋಳ್ಕರ್, ಸಹಾದೇವ, ನೀಲಕಂಠ, ಮುಖ್ಯಗುರುಗಳಾದ ಬಾಬು ಬೆಲ್ದಾಳ, ಸವಿತಾ ಭೂರೆ ಸೇರಿದಂತೆ ಹಲವರು ಇದ್ದರು.
ಗುರುಕುಲದಲ್ಲಿ ಸನ್ಮಾನ
ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕರಡ್ಯಾಳ ಚನ್ನಬಸವೇಶ್ವರ ಗುರುಕುಲಕ್ಕೆ ಭೇಟಿ ನೀಡಿದರು. ದತ್ತು ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ಅವರನ್ನು ಪೂಜ್ಯರು ಸನ್ಮಾನಿಸಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಸಲೀಂ ಪಾಶಾ, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ದತ್ತು ಕೇಂದ್ರದ ಅಧೀಕ್ಷಕ ಅನಿಲ ಹಾಲಕೂಡೆ, ಅಲ್ಲಮ್ಮ ಪ್ರಭು ಬಿಇಡಿ ಪ್ರಾಚಾರ್ಯ ಆಶಾ ಮುದಾಳೆ ಸೇರಿದಂತೆ ಬಿಇಡಿ ವಿದ್ಯಾರ್ಥಿಗಳು ಹಾಜರಿದ್ದರು.
ಬಸವಾದಿ ಶರಣರು ದೇವರಿಗೂ ಕನ್ನಡ ಕಲಿಸಿದರು. ಈ ಭಾಗದಲ್ಲಿ ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ನಾಮಫಲಕ ಹಾಕಿ ಕನ್ನಡ ಕಲಿಸಿ ಎಲ್ಲರಿಗೂ ಪ್ರೇರಣೆಯಾಗಿದ್ದರು. ಆದರೆ, ರಾಜ್ಯದಲ್ಲಿಂದು ಕನ್ನಡ ನಾಮಫಲಕ ಅಳವಡಿಸಿ ಇಂಗ್ಲಿಷ್ ಕಲಿಸುತ್ತಿರುವುದು ಆತಂಕ ತರಿಸಿದೆ. ಕನ್ನಡ ಭಾಷೆ ಉಳಿಸಲು ಎಲ್ಲರೂ ಕಂಕಣ ಬದ್ಧರಾಗಬೇಕು.
ಡಾ.ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕ ಆಗಿರುವುದು ನಮಗೆ ಅತ್ಯಂತ ಖುಷಿ ತಂದು ಕೊಟ್ಟಿದೆ. ಅವರು ಪ್ರಾಧ್ಯಪಕರಾಗಿ, ಜಾನಪದ ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರಲ್ಲಿ ತಮ್ಮದೇ ಯೋಚನೆ, ಯೋಜನೆ ಇದ್ದು, ಅವರ ಅವಧಿಯಲ್ಲಿ ಕನ್ನಡ ಭಾಷೆ ಬೆಳವಣಿಗೆಯಾಗಲಿದೆ.