ಓತಗಿಯಲ್ಲಿ ಸ್ವಚ್ಛತೆ ಮರಿಚಿಕೆ; ಪ್ರಮುಖ ರಸ್ತೆಯಲ್ಲಿ ಕೊಳಚೆ ಸಂಗ್ರಹ
(ಶಿವಶರಣ ಚಾಂಗಲೇರಿ )
ಹುಮನಾಬಾದ್ :ಜು.14: ತಾಲೂಕಿನ ಚಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓತಗಿ ಗ್ರಾಮದ ಪ್ರಮುಖ ರಸ್ತೆಗಳ ಬದಿಯಲ್ಲಿ ಕೊಳಚೆ ಸಂಗ್ರಹಿಸಿ ದುರ್ವಾಸನೆ ಬೀರುತ್ತದೆ.
ಹಳ್ಳಿಗಳ ಸ್ವಚ್ಛತೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿವೆ. ಆದರೆ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಚುನಾಯಿತ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಥಳೀಯರು ಸಾಕಷ್ಟು ಎದುರಿಸುವಂತ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವ ಹಿನ್ನಲೆ ನಾನಾ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ತಾಲೂಕಿನ ಓತಗಿ ಗ್ರಾಮದಲ್ಲಿ ಮಾತ್ರ ಸ್ವಚ್ಛತೆ ಸಂಪೂರ್ಣ ಮರಿಚಿಕೆಯಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಗ್ರಾಮದ ಸಮಗ್ರ ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದೆ ವಿಪರ್ಯಾಸ. ಹೀಗಾಗಿ ಜನರ ಹಿತದೃಷ್ಟಿಯಿಂದ ಕೂಡಲೇ ಸ್ವಚ್ಛತೆ ಮಾಡಬೇಕು. ಇಲ್ಲವಾದರೆ ಕೆಲವೆ ದಿನಗಳಲ್ಲಿ ತಾಲೂಕ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮದ ಕೆಲ ಮುಖಂಡರು ಎಚ್ಚರಿಸಿದ್ದಾರೆ.
ಜನರ ಆರೋಗ್ಯಕರ ಜೀವನಕ್ಕೆ ಸ್ವಚ್ಛತೆ ಬಹುಮುಖ್ಯ ಹೀಗಾಗಿ ಅಗತ್ಯ ಕ್ರಮ ಕೈಗೊಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳಿ ಸೂಚನೆ ನೀಡುವ ಮೂಲಕ ಓತಗಿ ಗ್ರಾಮ ಸ್ವಚ್ಛತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ದೀಪಿಕಾ ನಾಯ್ಕರ್
ಕಾರ್ಯನಿರ್ವಹಣಾ ಅಧಿಕಾರಿ ತಾಲೂಕ ಪಂಚಾಯತ ಹುಮನಾಬಾದ್
ಮಳೆಗಾಲ ಪ್ರಾರಂಭವಾಗಿದ್ದು, ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡುವುದು ಅನಿವಾರ್ಯತೆ ಇದೆ. ಆದರೆ ಓತಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಅಧಿಕಾರಿಗಳು ಸ್ವಚ್ಛತೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಒಂದು ಬಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ಇಸಾಮೋದ್ಧಿನ್ ಮೀರಾಸಾಬ್
ಸ್ಥಳೀಯ ನಿವಾಸಿ, ಓತಗಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತೆ ಕೈಗೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಲ್ಲದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಗ್ರಾಮಸ್ಥರು ಒಗ್ಗಟ್ಟಿನ ಹೋರಾಟ ಮಾಡಬೇಕು. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಸ್ವಚ್ಛತೆ ಮಾಡಿಸಬೇಕು. ಸ್ವಚ್ಛತೆ ಮಾಡಲು ವಿಳಂಬ ಮಾಡಿದರೆ ತಾಲೂಕ ಮಟ್ಟದ ಹೋರಾಟ ಮಾಡಲಾಗುತ್ತದೆ.
ಗಣಪತಿ ಅಷ್ಟೋರೆ
ಅಧ್ಯಕ್ಷ,
ಭಾರತೀಯ ದಲಿತ ಪ್ಯಾಂತರ್ ಸಂಘಟನೆ ಹುಮನಾಬಾದ್