ಚಿರತೆ ದಾಳಿಗೆ ಹೆಚ್.ಎಫ್ ಹಸು ಬಲಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.28: ತಾಲೂಕಿನ ಶೀಳನೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದಲ್ಲಿ ಸುಮಾರು 70 ಸಾವಿರ ಬೆಲೆ ಬಾಳುವ ಹೆಚ್.ಎಫ್. ಹಸು ಚಿರತೆ ದಾಳಿಗೆ ಬಲಿಯಾಗಿದೆ.
ಹಿರಳಹಳ್ಳಿ ಗ್ರಾಮದ ರೈತ ಹೆಚ್.ಟಿ.ಪಾಂಡುರಂಗಸ್ವಾಮಿ ಎನ್ನುವ ರೈತರಿಗೆ ಸೇರಿದ ಹಸು ಇದಾಗಿದೆ. ರೈತ ಪಾಂಡುರಂಗಸ್ವಾಮಿ ಗ್ರಾಮದ ಹೊರವಲಯದ ತಮ್ಮ ಜಮೀನಿನ ಬಳಿ ಹಸುವನ್ನು ಮೇಯಲು ಕಟ್ಟಿ ಹಾಕಿದ್ದರು. ಈ ಸಂದರ್ಭದಲ್ಲಿ ಹಾಡು ಹಗಲೇ ಗುರುವಾರ ಮದ್ಯಾಹ್ನ 3.30 ರ ವೇಳೆಗೆ ಹಸುವಿನ ಮೇಲೆ ದಾಳಿ ಮಾಡಿರುವ ಚಿರತೆ ಹಸುವನ್ನು ಬಲಿಪಡೆದಿದೆ.
ತಾಲೂಕಿನಾದ್ಯಂತ ಚಿರತೆ ಹಾವಳಿ ಮಿತಿ ಮೀರಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಸಾಕು ನಾಯಿಗಳು ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗಳು ಇದೀಗ ಹಾಡು ಹಗಲೇ ರೈತರ ಹೊಲ ಗದ್ದೆಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು ಜನ ಭಯಬೀತಗೊಂಡಿದ್ದಾರೆ. ತಕ್ಷಣವೇ ಅರಣ್ಯ ಇಲಖೆ ಬೋನಿಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿರುವ ಗ್ರಾಮಸ್ಥರು ಚಿರತೆ ದಾಳಿಯಿಂದ ಬೆಲೆ ಬಾಳುವ ಹಸುವನ್ನು ಕಳೆದುಕೊಂಡಿರುವ ರೈತ ಪಾಂಡುರಂಗಸ್ವಾಮಿಯವರಿಗೆ ಅರಣ್ಯ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.