ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಿ : ಡಾ.ಮನ್ಮಥ ಡೋಳೆ
ಸಂಜೆವಾಣಿ ವಾರ್ತೆ
ಔರಾದ :ಸೆ.೨೮: ಶಿಕ್ಷಣ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಅದು ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಬಲ್ಲದು. ಆದರೆ ಇತ್ತೀಚೆಗೆ, ಎಷ್ಟೆಲ್ಲ ಓದಿ ಏನೆಲ್ಲ ಕಲಿತರೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಎಲ್ಲೆಲ್ಲೂ ಲಂಚಕೋರತನ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಇದು ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಸಾಹಿತಿ, ಪ್ರಾಚಾರ್ಯ ಡಾ. ಮನ್ಮಥ್ ಡೋಳೆ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ನಾಲಂದಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೈತಿಕ ಮೌಲ್ಯಗಳು ದೇಶದಿಂದ ದೇಶಕ್ಕೆ ವಿಭಿನ್ನವಾಗಿದ್ದು, ಕಾಲಕಾಲಕ್ಕೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಇದಕ್ಕೆ ಕಾರಣ ಅವರ ವಿಭಿನ್ನ ಸಂಸ್ಕೃತಿಗಳು. ಏನೇ ಆದರೂ ನಾವೆಲ್ಲ ಮಾನವರಾಗಿಯೇ ಉಳಿಯಬೇಕಾದರೆ ನೈತಿಕ ಮೌಲ್ಯಗಳನ್ನು ಶಾಲೆಯಿಂದ ಕಾಲೇಜು ಹಂತದವರೆಗೂ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ಜೀವನದಲ್ಲಿಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕುವುದೇ ನಿಜವಾದ ಸಂತೋಷ. ಆ ನಿಟ್ಟಿನಲ್ಲಿವಿದ್ಯಾರ್ಥಿಗಳು, ಯುವಜನಾಂಗ ಇಂದು ಪೋಷಕರನ್ನು ಗೌರವಿಸುವ ಗುಣ ರೂಡಿಸಿಕೊಳ್ಳಬೇಕಿದೆ. ಸ್ವಾರ್ಥ ಮನೋಭಾವ ಬಿಟ್ಟು ಇಡೀ ಸಮಾಜವೇ ನನ್ನದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ವ್ಯವಹಾರದಲ್ಲಿಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ಪಾರದರ್ಶಕವಾಗಿ ಬದುಕುವುದು, ಸಮಾಜದಲ್ಲಿಪ್ರತಿಯೊಬ್ಬರನ್ನು ಗೌರವಿಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ನಿತ್ಯ ಹೇಳಲಾಗುತ್ತದೆ ಎಂದರು
ಮುಖ್ಯ ಶಿಕ್ಷಕ ನಾಗನಾಥ ಚಿಟ್ಮೆ ಮಾತನಾಡಿ, ಹೃದಯಕ್ಕೆ ನೈತಿಕ ಮೌಲ್ಯ ಸಂಸ್ಕಾರ ಕುಡುವಂತಾಗಬೇಕು ಎಂದು ಹೇಳಿದರು. ಶಿಕ್ಷಕಿ ಪ್ರೀಯಾ ಎಮ್. ಬಿರಾದಾರ, ವನ್ಯಜೀವಿ ಪ್ರೇಮಿ ರಿಯಾಜಪಾಶಾ ಕೊಳ್ಳೂರ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರಕಾಶ್ ಬಸಲಿಂಗ, ರಾಜಕುಮಾರ ಬೆಲ್ದಾರ, ದಿಲೀಪಕುಮಾರ್ ತಾರೆ ಸೇರಿದಂತೆ ಇನ್ನಿತರರಿದ್ದರು.