ಅರಂತೋಡು ಮತ್ತು ಉಬರಡ್ಕ ಗ್ರಾಮದಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ – ಕೃಷಿ ನಾಶ
ಸುಳ್ಯ:ಕಳೆದ ಕೆಲವು ದಿನಗಳ ಹಿಂದೆ ಸುಳ್ಯ ನಗರದ ಸಮೀಪ ಉಬರಡ್ಕ ಕಡೆ ಹೋಗಿದ್ದ ಕಾಡಾನೆಗಳ ಹಿಂಡು ಅರಂತೋಡು ಮತ್ತು ಉಬರಡ್ಕ ಗ್ರಾಮಗಳಲ್ಲಿನ ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶಗೊಳಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಅರಂತೋಡು ಗ್ರಾಮದ ಅಡ್ಕಬಳೆ ಪರಿಸರದಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ನಾಶಗೊಳಿಸಿದೆ. ಅರಂಬೂರಿನ ಪರಿವಾರಕಾನದಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸಿದ್ದ ಆನೆಗಳು ಇದೀಗ ಅರಂತೋಡು ಪರಿಸರದ ಅಡ್ಕಬಳೆಯ ಗಂಗಾಧರ ಗೌಡ, ಲೀಲಾವತಿ ಅಡ್ಕಬಳೆ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿ, ತೆಂಗು, ಅಡಿಕೆ ಹಾಗೂ ಬಾಳೆ ಕೃಷಿ ನಾಶಪಡಿಸಿದೆ. ಅಲ್ಲದೇ ಉಬರಡ್ಕ ಮಿತ್ತೂರು ಗ್ರಾಮದ ಕೂಟೇಲು ಎಂಬಲ್ಲಿ ವೆಂಕಪ್ಪ ಗೌಡ, ಯನ್. ಜನಾರ್ಧನ ಗೌಡ, ಯನ್. ಪದ್ಮಯ್ಯ ಗೌಡ, ಯನ್. ಜಾನಕಿ ರವರ ತೋಟಗಳಿಗೆ ತಡ ರಾತ್ರಿ ಆನೆಗಳ ಹಿಂಡು ಧಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಅಡಕೆ, ತೆಂಗು, ಬಾಳೆ ಕೃಷಿ ನಾಶ ಮಾಡಿದೆ.