ತನ್ನಿಂತಾನೆ ಚಲಿಸಿದ ಲಾರಿ: ತಪ್ಪಿದ ಭಾರಿ ಅನಾಹುತ
ಸುಳ್ಯ:ಆಲೆಟ್ಟಿ ರಸ್ತೆಯ ಗುರುಂಪು ಬಳಿ ಇರುವ ರಬ್ಬರ್ ಗೋಡಾನ್ ನಿಂದ ರಬ್ಬರ್ ಲೋಡ್ ಮಾಡಿ ನಿಂತಿದ್ದ ಲಾರಿಯೊಂದು ತನ್ನಿಂತಾನೆ ಮುಂದಕ್ಕೆ ಚಲಿಸಿ ಆಲೆಟ್ಟಿಯ ಮುಖ್ಯ ರಸ್ತೆಯನ್ನು ದಾಟಿ ಕೆಳಗೆ ಇಳಿದ ಘಟನೆ ಶುಕ್ರವಾರ ನಡೆದಿದೆ.
ಮುಖ್ಯ ರಸ್ತೆಯಲ್ಲಿ ಆ ಸಮಯದಲ್ಲಿ ಯಾವುದೇ ವಾಹನಗಳ ಮತ್ತು ಜನರ ಓಡಾಟವಿಲ್ಲದಿದ್ದುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಲಾರಿಯ ಮೇಲೆ ಚಾಲಕ ರಬ್ಬರ್ ಲೋಡ್ ಮಾಡಿ ಟರ್ಪಾಲ್ ಹೊದಿಕೆಯನ್ನು ಹಾಕುತ್ತಿರುವಾಗ ಇದ್ದಕ್ಕಿದ್ದಂತೆ ಲಾರಿ ಮುಂದಕ್ಕೆ ಚಲಿಸಿತು. ಗಮನಿಸಿದ ಲಾರಿ ಚಾಲಕ ಮೇಲಿನಿಂದ ಕೆಳಕ್ಕೆ ಹಾರಿದ್ದರಿಂದ ಆತ ಅಲ್ಪ ಸ್ವಲ್ಪ ಗಾಯಗೊಂಡು ಪಾರಾಗಿದ್ದಾನೆ. ಒಂದು ವೇಳೆ ಲಾರಿ ಮತ್ತಷ್ಟು ಮುಂದಕ್ಕೆ ಚಲಿಸಿರುತ್ತಿದ್ದರೆ ಕೆಳಗಡೆ ಹಲವು ಮನೆಗಳಿದ್ದು ದೊಡ್ಡ ಪ್ರಮಾಣದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇತ್ತು.