ಚೆನ್ನೈ-ಶಿವಮೊಗ್ಗ ಹೊಸ ರೈಲಿಗೆ ಆತ್ಮೀಯ ಸ್ವಾಗತ
ತುಮಕೂರು, ಜು. ೧೪- ತುಮಕೂರು ಮಾರ್ಗವಾಗಿ ಸಂಚರಿಸುವ ಚೆನ್ನೈ-ಶಿವಮೊಗ್ಗ ನಡುವಿನ ಹೊಸ ರೈಲು ಸಂಚಾರ ಸೇವೆ ಆರಂಭವಾಗಿದ್ದು, ಚೆನ್ನೈನಿಂದ ಹೊರಟು ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ ಈ ರೈಲನ್ನು ಜಿಲ್ಲಾ ಕನ್ನಡ ಸೇನೆ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅಭಿಮಾನಿಗಳು ಸ್ವಾಗತಿಸಿ ಸಂಭ್ರಮದಿಂದ ಬರಮಾಡಿಕೊಂಡರು.
ಚೆನ್ನೈನಿಂದ ಹೊರಟ ನಗರದ ನಿಲ್ದಾಣಕ್ಕೆ ಆಗಮಿಸಿದ ರೈಲಿಗೆ ಹೂವಿನ ಮಾಲೆ ಹಾಕಿ, ಪೂಜೆ ಸಲ್ಲಿಸಿ ಸ್ವಾಗತಿಸಿ ಸಂಭ್ರಮಿಸಿದರು.
ಈ ರೈಲು ಪ್ರತಿ ಶುಕ್ರವಾರ ರಾತ್ರಿ ೧೧.೩೦ಕ್ಕೆ ಚೆನ್ನೈನಿಂದ ಹೊರಟು ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಭದ್ರಾವತಿ ಮಾರ್ಗವಾಗಿ ಶನಿವಾರ ಮಧ್ಯಾಹ್ನ೧ ಗಂಟೆಗೆ ಶಿವಮೊಗ್ಗ ತಲುಪಲಿದೆ. ಹಾಗೆಯೇ ಪ್ರತಿ ಶನಿವಾರ ಸಂಜೆ ೪ ಗಂಟೆಗೆ ಶಿವಮೊಗ್ಗದಿಂದ ಹೊರಟು ಭಾನುವಾರ ಬೆಳಿಗ್ಗೆ ೪.೫೫ಕ್ಕೆ ಚೆನ್ನೈ ತಲುಪಲಿದೆ.
ವಿ.ಸೋಮಣ್ಣ ಅವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ನಂತರ ತುಮಕೂರು ಜಿಲ್ಲೆಗೆ ರೈಲ್ವೆ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿವೆ. ತುಮಕೂರು ರೈಲು ನಿಲ್ದಾಣವನ್ನು ೧೦೦ ಕೊಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು-ತುಮಕೂರು ನಡುವಿನ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಮನವಿ ಮಾಡಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಹೇಳಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗೆ ಸಚಿವ ಸೋಮಣ್ಣ ಅವರು, ವೇಗದ ಚಾಲನೆ ನೀಡಿದ್ದಾರೆ. ಈ ಎರಡು ಯೋಜನೆಗಳಲ್ಲಿ ಬಾಕಿ ಇದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಸೋಮಣ್ಣ ಅವರು ಚುರುಕುಗೊಳಿಸಿದ್ದಾರೆ, ಇನ್ನೆರಡು ವರ್ಷಗಳಲ್ಲಿ ಈ ಮಾರ್ಗದಲ್ಲಿ ರೈಲು ಸೇವೆಯನ್ನು ಜನರಿಗೆ ಅರ್ಪಣೆ ಮಾಡುವುದಾಗಿ ಸಚಿವ ಸೋಮಣ್ಣ ಹೇಳಿದ್ದಾರೆ ಎಂದು ಹೇಳಿ, ಸಚಿವರನ್ನು ಅಭಿನಂದಿಸಿದರು.
ರೈತ ಸಂಘದ ಮುಖಂಡ ವಿ.ಎಸ್.ಬಸವರಾಜು, ಮುಖಂಡರಾದ ಡಿ.ಎಂ.ಸತೀಶ್, ಹಕ್ಕೋತ್ತಾಯ ಬಸವರಾಜು, ಕೊಪ್ಪಳ್ ನಾಗರಾಜು, ಗೋಕುಲ್ ಮಂಜುನಾಥ್, ಎಸ್.ರಾಮಚಂದ್ರ ರಾವ್, ಬೆಸ್ಟೆಕ್ಸ್ ರಾಮರಾಜ್, ಶಬ್ಬೀರ್ ಅಹ್ಮದ್, ವೀರಭದ್ರಯ್ಯ, ಬಸವರಾಜು, ಲಕ್ಷ್ಮೀನಾರಾಯಣ್, ವೆಂಕಟೇಶಾಚಾರ್, ರಫೀಕ್ ಅಹ್ಮದ್, ಉದಯಕುಮಾರ್, ಮಲ್ಲೇಶಯ್ಯ, ಹರೀಶ್, ಗಿರೀಶ್, ವಿಠಲ್, ಇಮ್ರಾನ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.