42 ಕೋಟಿ ವೆಚ್ಚದ ಕಾಮಗಾರಿ ಬ್ರಿಡ್ಜ್ ಕಂ  ಬ್ಯಾರೇಜ್:ಬಾಂದಾರಕ್ಕೆ ಕ್ರಸ್ಟ್ ಗೇಟ್ ಅಳವಡಿಸಲು ಆಗ್ರಹ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.14: ಸೇತುವೆ ಮತ್ತು ಬಾಂದಾರು (ಬ್ರಿಡ್ಜ್ ಕಂ  ಬ್ಯಾರೇಜ್) ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು ಈವರೆಗೆ ಕ್ರಸ್ಟ್ ಗೇಟ್ ಅಳವಡಿಸದ ಕಾರಣ ಮಳೆಗಾಲದಲ್ಲಿ ನೀರು ವ್ಯರ್ಥ್ಯವಾಗಿ ಹರಿಯುವಂತಾಗಿದೆ ಎಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಲುಕುಂದಿ ಮುದೇನೂರು ಗ್ರಾಮದ ಬಳಿ ವೇದಾವತಿ (ಹಗರಿ)ಗೆ ಅಡ್ಡವಾಗಿ ನಿರ್ಮಿಸಲಾಗಿರುವ ಸೇತುವೆ ಮತ್ತು ಬಾಂದಾರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು.
ಈ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಸುಮಾರು 2,5 ರಿಂದ 3 ಟಿ. ಎಂ ಸಿ ನೀರು ನಿಲ್ಲಿಸುವ ಯೋಜನೆಯಾಗಿದೆ. ಆದರೆ ಬಾಂದಾರದ ಕ್ರಸ್ಟ್ ಗೇಟ್ ಎತ್ತರ  4 ಮೀಟರ್ ಇದ್ದು ಇದನ್ನು 5 ಮೀಟರ್ ಗೆ ಎತ್ತರಿಸಬೇಕು. ಇದರಿಂದ 6ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದು ಆಗ್ರಹಿಸಿದರು.
ಸೇತುವೆಯಿಂದ ಬಲಕುಂದಿ ಗ್ರಾಮದ ಮುಖ್ಯ ರಸ್ತೆವರೆಗೆ ಸಂಪರ್ಕ ರಸ್ತೆ ನಿರ್ಮಾಣ, ಸೇತುವೆ ಎರಡೂ ಬದಿ ರ್ಯಾಂಪ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೋರಿ ಪಿಡ್ಡಯ್ಯ, ಎಸ್ ಸಿ ಮೋರ್ಚ ಜಿಲ್ಲಾಧ್ಯಕ್ಷ ಮೆಕೇಲಿ ವೀರೇಶ್ ನಗರಸಭೆ ಸದಸ್ಯ ಮಹದೇವ, ನಟರಾಜ್, ಎಮ್ ಆರ್ ಗೌಡ, ವೀರನಗೌಡ, ಎಸ್ ಟಿ ಮೋರ್ಚ  ಅಧ್ಯಕ್ಷ ಶಿವಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸವ ಇದ್ದರು.
ಬಾಂದಾರಕ್ಕೆ ಗೇಟ್ ಅಳವಡಿಸಲು ಇನ್ನೂ ಕಾಲಾವಕಾಶ ಇದೆ. ಕೆಳಮಟ್ಟದ ರೈತರಿಗೆ ಸಮಸ್ಯೆ ಆಗಬಾರದು ಎಂದು ನೀರು ಹರಿಯ ಬಿಡಲಾಗಿದ್ದು, ಮಳೆಗಾಲದ ಕೊನೆಯಲ್ಲಿ ಗೇಟ್ ಅಳವಡಿಸಿ ನೀರು ಸಂಗ್ರಹಿಸಲಾಗುವುದು ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಎಇಇ ಎಸ್.ಪಿ  ನಾಗೇಂದ್ರ ತಿಳಿಸಿದರು.