ತಾಂತ್ರಿಕ ಮಹಾವಿದ್ಯಾಲಯದ ಪದವಿ ಪ್ರದಾನ
ಬೆಂಗಳೂರು, ಜು.೧೪- ಶಿಕ್ಷಣವು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ಮಾತ್ರವಲ್ಲ, ಶ್ರೇಷ್ಠತೆಗಾಗಿ ಶ್ರಮಿಸಲು ಮತ್ತು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಲು ಪ್ರೇರೇಪಿಸುವುದು ಮುಖ್ಯವಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ತಿಳಿಸಿದರು.
ನಗರದಲ್ಲಿಂದು ಪಾಂಚಜನ್ಯ ವಿದ್ಯಾಪೀಠ ಕಲ್ಯಾಣ ದತ್ತಿ ಟ್ರಸ್ಟ್ ಹಾಗೂ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ ೧೧ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂಬುದು ಕೇವಲ ಮಾಹಿತಿ ಅಥವಾ ಪದವಿ ಪಡೆಯುವುದಲ್ಲ. ಅದೊಂದು ನಿರಂತರ ಪ್ರಕ್ರಿಯೆಯಾಗಿದೆ.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡು ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶ್ವದೆಲ್ಲೆಡೆ ನಮ್ಮ ಎಂಜಿನಿಯರ್‌ಗಳು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ದೇಶದ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ರಾಷ್ಟ್ರೀಯ ಶಿಕ್ಷ ಣ ನೀತಿ ಅಳವಡಿಕೆಯ ನಂತರ ವಿದ್ಯಾರ್ಥಿ ಗಳ ಭೌತಿಕ ಬೆಳವಣಿಗೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಹೆಜ್ಜೆ ಇಡಬೇಕು ಎಂದರು.
ಭಾರತದ ವೆಚ್ಚ ನಿಯಂತ್ರಣದ ಸ್ಪರ್ಧಾತ್ಮಕತೆಯು ಹೊಸ ಜ್ಞಾನದ ಆರ್ಥಿಕತೆಯನ್ನು ಸೃಷ್ಟಿಸುವ ಅನೇಕ ಅವಕಾಶಗಳನ್ನು ಸೆಳೆಯುವ, ಸಂಶೋಧನೆ ನಡೆಸುವ ಪರಿಕ್ರಮಗಳು ಎಐಸಿಟಿಇಗೆ ಪ್ರಯೋಜನವಾಗಿವೆ. ಭಾರತೀಯ ವಿದ್ಯಾರ್ಥಿಗಳಲ್ಲಿ ನಾಯಕತ್ವ ರೂಪಿಸುವಲ್ಲಿ, ನವೋದ್ಯಮ ಸ್ಥಾಪಿಸು ಉದ್ದೇಶದಿಂದ ಎಐಸಿಟಿಯು ಹಲವಾರು ನಿಯಂತ್ರಣ ನಿಬಂಧನೆಗಳಲ್ಲಿ ಬದಲಾವಣೆ ತಂದಿದೆ.
ಹಲವಾರು ಪರಿವರ್ತಕ ಶಿಕ್ಷಣವನ್ನು ಅಳವಡಿಸಿ, ಸುಸ್ಥಿರ ಸಮಾಜಕ್ಕಾಗಿ ಹೊಸ ಜ್ಞಾನವನ್ನು ಸೃಷ್ಟಿಸುತ್ತಿದೆ. ವೈವಿಧ್ಯಮಯ ದೃಷ್ಟಿಕೋನಗಳು, ಸಂಸ್ಕೃತಿಗಳು ಮತ್ತು ಜನರಿಂದ ತುಂಬಿರುವ ಪ್ರಪಂಚವು ಬಹುದೊಡ್ಡದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅವರು ಪದವಿ ಪ್ರದಾನ ಮಾಡಿದರು. ಪಾಂಚಜನ್ಯ ವಿದ್ಯಾಪೀಠ ಕಲ್ಯಾಣದತ್ತಿ ಅಧ್ಯಕ್ಷ ಎಸ್.ಮರಿಸ್ವಾಮಿ, ಕಲ್ಯಾಣದತ್ತಿ ಕಾರ್ಯದರ್ಶಿ ಎಸ್.ಶಿವಮಲ್ಲು, ಖಜಾಂಜಿ ಎಂ.ಮಹದೇವ, ಶಾಸಕ ಎ.ಆರ್.ಕೃಷ್ಣಮೂರ್ತಿ, ಪ್ರಾಂಶುಪಾಲ ಡಾ.ಸಿ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಸಿದ್ದರಾಜು, ಪಟ್ನಾಯಕ್ ಸೇರಿದಂತೆ ಮತ್ತಿತರಿದ್ದರು.