ಹುಟ್ಟುಹಬ್ಬ ಆಚರಣೆಗೆ ತೆರಳಿದವರು ಅಪಘಾತಕ್ಕೆ ಬಲಿ
ಬೆಂಗಳೂರು,ಜು.೧೪- ಹುಟ್ಟುಹಬ್ಬ ಆಚರಿಸಲು ತಡರಾತ್ರಿ ಕಾರಿನಲ್ಲಿ ಲಾಂಗ್ ಡ್ರೈವ್ ಹೊರಟು ಹೆದ್ದಾರಿಗೆ ಬಂದ ಕಾರಿಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಹೆಬ್ಬಾಳ ಕೆಂಪಾಪುರದ ಸಿದ್ಧಾರ್ಥ್ (೧೭) ಮತ್ತು ಹರ್ಷ (೧೮) ಮೃತಪಟ್ಟವರು, ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರಿಬ್ಬರು ಸ್ನೇಹಿತರ ಜತೆಗೆ ಹುಟ್ಟುಹಬ್ಬ ಆಚರಿಸಲು ಮಧ್ಯರಾತ್ರಿ ಕಾರಿನಲ್ಲಿ ಲಾಂಗ್ ಡ್ರೈವ್ ಮಾಡಿಕೊಂಡು ಬಂದಿದ್ದರು.
ಈ ವೇಳೆ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಹಿಂಭಾಗ ಮುಂಭಾಗ ಸಂಪೂರ್ಣ ಜಖಂಗೊಂಡು ಇವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿಟ್ ಅಂಡ್ ರನ್ ಮಾಡಿ ಹೋದ ವಾಹನಕ್ಕೆ ಪ್ರಕರಣ ದಾಖಲಿಸಿರುವ ಸೂಲಿಬೆಲೆ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.
ಯುವಕರಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಎಸ್.ಪಿ.ಚಂದ್ರಶೇಖರ ಬಾಬಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.