ಡೆಂಗ್ಯೂ ತಡೆಗೆ ಸಾರ್ವಜನಿಕರ ಎಚ್ಚರಿಕೆ ಅಗತ್ಯ
ಕೆಂಗೇರಿ, ಜು.೧೪- ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗುತ್ತಿರುವ ಪರಿಣಾಮದಿಂದ. ಡೆಂಗ್ಯೂ ಜ್ವರ ರೋಗ ಲಕ್ಷಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ದೊಡ್ಡಬಿದರಕಲ್ಲು ಬಿಜೆಪಿ ವಾರ್ಡ್ ಕಮಿಟಿ ಸದಸ್ಯ ಎಂ.ಮಂಜುನಾಥ್ ಮನವಿ ಮಾಡಿದರು.
ಶಾಸಕ ಎಸ್. ಟಿ. ಸೋಮಶೇಖರ್ ರವರ ಆದೇಶದ ಮೇರೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರ ದೊಡ್ಡಬಿದರಕಲ್ಲು ವಾರ್ಡ್ ಚನ್ನನಾಯಕನಪಾಳ್ಯದಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ದೊಡ್ಡಬಿದರಕಲ್ಲು ವಾರ್ಡ್ ಬಿಬಿಎಂಪಿ ಆರೋಗ್ಯ ವಿಭಾಗದಿಂದ ಆಯೋಜಿಸಿದ್ದ ಜನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಮೂಲಕ ಡೆಂಗಿ ಜ್ವರದಿಂದ ದೂರ ಇರಬೇಕೆಂದರು.ನಾಗರಿಕರು ಡೆಂಗಿ ಜ್ವರದ ಕುರಿತು ಆತಂಕ ಪಡುವ ಅಗತ್ಯವಿಲ್ಲ ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡಿ ಡೆಂಗಿ ಹರಡುವ ಈಡಿಸ್ ಸೊಳ್ಳೆಗಳ ತಾಣಗಳನ್ನು ನಾಶಪಡಿಸುವ ಮೂಲಕ ಡೆಂಗಿ ಜ್ವರ ನಿಯಂತ್ರಿಸಲು ಸಹಕಾರ ನೀಡಬೇಕೆಂದರು.
ದೊಡ್ಡಬಿದರಕಲ್ಲು ವಾರ್ಡ್ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ರಮೇಶ್ ಮಾತನಾಡಿ ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್ ಡ್ರಮ್ ಗಳು, ಬಕೆಟ್ ಗಳು, ಬ್ಯಾರೆಲ್ ಗಳು, ಖಾಲಿ ಡಬ್ಬಗಳು,, ತೆಂಗಿನ ಚಿಪ್ಪುಗಳು ಹಳೆಯ, ಒಡೆದ ಟೈಯರ್ ಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿ ಕೊಳ್ಳುವ ಮೂಲಕ ಡೆಂಗಿ ಜ್ವರದಿಂದ ದೂರ ಇರಬೇಕೆಂದು ತಿಳಿಸಿದರು. ಇದೇ ವೇಳೆ ಬಿಬಿಎಂಪಿ ವತಿಯಿಂದ ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ನಿರ್ಮೂಲನಾ ದ್ರಾವಣವನ್ನು ಸಿಂಪಡಿಸಿದರು.