ರಾಯಚೂರಿನಲ್ಲಿ ಏಮ್ಸ್‍ಗಾಗಿ ಜುಲೈ 17ಕ್ಕೆ ದೆಹಲಿ ಚಲೋ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು14: ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯನ್ನು (ಏಮ್ಸ್) ಸ್ಥಾಪಿಸಲೇಬೇಕೆಂದು ಆಗ್ರಹಿಸಿ, ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜು. 16 ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮ ಶೆಟ್ಟಿ ಬಣ) ರಾಯಚೂರು ಜಿಲ್ಲಾ ಸಂಚಾಲಕ ಅಶೋಕ್ ಕುಮಾರ್ ಜೈನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಹಾಗೂ ಹಲವು ಮಾಲಿನ್ಯಕಾರಕ ಉದ್ಯಮಗಳಿಂದ ಕಾಯಿಲೆಗಳ ಗೂಡಾಗಿರುವ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯನ್ನು (ಏಮ್ಸ್) ಸ್ಥಾಪಿಸಲೇಬೇಕೆಂದು ಆಗ್ರಹಿಸಿ, ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಕರೆ ನೀಡಿದ್ದು,
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರೈತ ಸಂಘ ಸಹಿತ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರಿಂದಾಗಿಯೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಳಂಬವಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ‘ಏಮ್ಸ್‍ಗಾಗಿ ರಾಯಚೂರಿನಲ್ಲಿ 84 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಇದೇ 23ಕ್ಕೆ ಕೇಂದ್ರ ಬಜೆಟ್ ಇದ್ದು, ಅದರೊಳಗೆ ಕೇಂದ್ರದ ಮೇಲೆ ಒತ್ತಡ ತಂತ್ರ ಹೇರುವ ಭಾಗವಾಗಿ ಈ ಪ್ರತಿಭಟನೆ ನಡೆಯಲಿದೆ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಮನವಿ ಕಳುಹಿಸಿಕೊಡಲಾಗುವುದು. ಜುಲೈ 17ಕ್ಕೆ ದೆಹಲಿಗೆ ತೆರಳಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದರು.
ಮುಖಂಡರಾದ, ಬೋಡ ರಾಮಪ್ಪ, ಗಂಟೆ ಸೋಮಶೇಖರ್, ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಮಧುರಚನ್ನಶಾಸ್ತ್ರಿ, ಭರತ್ ಕುಮಾರ್, ಪರಮೇಶ ಗೌಡ, ಬಾಲೇಸಾಬ್ ಇತರರು ಸುದ್ಧಿಗೊಷ್ಠಿಯಲ್ಲಿದ್ದರು.