ಕಾನೂನು ಚೌಕಟ್ಟಿನಲ್ಲಿ ವಿಲೇವಾರಿ ಮಾಡಿ
ಮಾಲೂರು ಜು.೧೪- ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲಿಸದೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಬ್ರಷ್ಟಾಚಾರ ರಹಿತವಾಗಿ ಫಲಾನುಭವಿಗಳು ನೇರವಾಗಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ತಾಲೂಕಿನ ಮಾಸ್ತಿ ಗ್ರಾಮದ ಟಿ.ಜಿ.ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ನೌಕರರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜನಸಂಪರ್ಕ ಸಭೆಗಳಲ್ಲಿ ನೀಡುವ ಅರ್ಜಿಗಳಲ್ಲಿ ಶೇಕಡಾ ೯೮ ರಷ್ಟು ಅರ್ಜಿಗಳು ವಿಲೇವಾರಿ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಬಂದ ಅರ್ಜಿಗಳು ಕಾನೂನು ಚೌಕಟ್ಟಿನಲ್ಲಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು, ತಾಲೂಕಿನಲ್ಲಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನನ್ನ ಮೂಲ ಧ್ಯೇಯವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು, ಬಡವರು ಸಾಮಾನ್ಯ ಜನರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಅವರ ಬಳಿ ಸೌಜನ್ಯವಾಗಿ ವರ್ತಿಸುವ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದ ಅವರು, ರೈತರು ಸ್ವಾಧೀನದಲ್ಲಿರುವ ಪಿ ನಂಬರ್ ಜಮೀನುಗಳು ಸುಮಾರು ವರ್ಷಗಳಿಂದ ದುರಸ್ತಿಯಾಗುತ್ತಿಲ್ಲ, ರೆಕಾರ್ಡ್ ರೂಮುಗಳಲ್ಲಿ ದಾಖಲೆಗಳು ಸಿಗುತ್ತಿಲ್ಲ, ಜಮೀನು ಸ್ವಾಧೀನದಲ್ಲಿರುವ ರೈತರ ಜಮೀನನ್ನು ಸ್ಥಳ ಪರಿಶೀಲನೆ ನಡೆಸಿ ಅವರಿಗೆ ಪಿ ನಂಬರ್ ದುರಸ್ತಿ ಮಾಡಿಕೊಡುವ ಮೂಲಕ ಜಿಲ್ಲಾಧಿಕಾರಿಗಳು ಸರ್ಕಾರದಲ್ಲಿ ಚರ್ಚಿಸಿ ಪಿ ನಂಬರ್ ಜಮೀನಿನ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ರೈತರು ಸ್ವಾಧೀನದಲ್ಲಿರುವ ಜಮೀನಿಗೆ ಭೂ ಮಂಜೂರಾತಿಗಾಗಿ ಸುಮಾರು ೮೦೦೦ ಅರ್ಜಿಗಳನ್ನು ಫಾರಂ ನಂಬರ್ ೫೩-೫೭ ಮೂಲಕ ಅರ್ಜಿಗಳನ್ನು ಹಾಕಿದ್ದು ದರಕಾಸ್ತು ಸಮಿತಿಯಲ್ಲಿ ಇಟ್ಟು ಚರ್ಚಿಸಿ ಸ್ವಾಧೀನದಲ್ಲಿರುವ ರೈತರ ಕಂದಾಯ ಇಲಾಖೆಯ ಅಧಿಕಾರಿಗಳು ನಡೆದು ತೆರಳಿ ಸ್ಥಳ ಪರಿಶೀಲನೆ ನಡೆಸಿ ಹಂತ ಹಂತವಾಗಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಕೈಗೊಂಡ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ ಎಂದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲಿಯುವುದನ್ನು ತಪ್ಪಿಸಲು ದಾಖಲೆಗಳನ್ನು ಡಿಜಿಟಿಲಿ ಕರಣದ ಮೂಲಕ ನೀಡಲಾಗುತ್ತಿದೆ ಕಂದಾಯ ಇಲಾಖೆಯಲ್ಲಿ ಜಮೀನು ನೋಂದಣಿಯಾದ ೭ ನೋಟಿಸ್ ದಿನಗಳು ಮುಗಿದ ೮ನೇ ದಿನದಲ್ಲಿ ಮಾಡಿಕೊಡಲಾಗುತ್ತಿದೆ ೧೫ ದಿನಗಳ ನೋಟಿಸ್ ನೀಡಿದ ೧೬ ದಿನದಲ್ಲಿಯೇ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಖಾತೆ ಆಗುತ್ತಿದೆ, ಜಿಲ್ಲಾ ನ್ಯಾಯಾಲಯದಲ್ಲಿ ಅಧಿಕಾರವಹಿಸಿಕೊಂಡಾಗ ೫ ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ೩ ತಿಂಗಳಲ್ಲಿ ಇತ್ಯರ್ಥ ಪಡಿಸಲಾಗಿದೆ. ಎಸಿ ನ್ಯಾಯಾಲಯದಲ್ಲಿ ಉಳಿದ ಪ್ರಕರಣಗಳನ್ನು ಸಹ ವಿಲೇವಾರಿ ಮಾಡಲಾಗುತ್ತಿದೆ, ತಹಸಿಲ್ದಾರ್ ನ್ಯಾಯಾಲಯದಲ್ಲಿ ೧೦,೦೦೦ ಪ್ರಕರಣಗಳಲ್ಲಿ ೨೦೦ ಪ್ರಕರಣಗಳು ಮಾತ್ರ ಉಳಿದಿವೆ, ರೆಕಾರ್ಡ್ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ, ಆರ್‌ಟಿಸಿಯಂತೆ ಪೈಲೋಡಿಂಗ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿತ್ತು, ಪ್ರಾಯೋಗಿಕವಾಗಿ ಕೋಲಾರ ತಾಲೂಕಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಹಂತವಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಫೈಲ್ ಲೋಡಿಂಗ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು ಇದರಿಂದ ಕಂದಾಯ ಇಲಾಖೆಯ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ ತ್ವರಿತವಾಗಿ ಪರಿಣಾಮಕಾರಿಯಾಗಿ ಜಿಲ್ಲಾಡಳಿತ ತಾಲೂಕು ಆಡಳಿತ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದರು. ಕೃಷಿ ಇಲಾಖೆಯು ಸರ್ಕಾರದ ಯೋಜನೆಗಳನ್ನು ಪ್ರಚಾರಪಡಿಸಲು ಹಮ್ಮಿಕೊಂಡಿರುವ ಕೃಷಿ ರಥ ಯಾತ್ರೆಗೆ ಶಾಸಕ ಕೆ ವೈ ನಂಜೇಗೌಡ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಕಾರ್ಯದರ್ಶಿ ಶಿವಕುಮಾರ್, ತಹಶೀಲ್ದಾರ್ ಕೆ ರಮೇಶ್, ತಾ ಪಂ ಇಒ ವಿ ಕೃಷ್ಣಪ್ಪ, ಗ್ರೇಡ್ ಟು ತಹಸಿಲ್ದಾರ್ ಹರಿಪ್ರಸಾದ್, ಪಿಆರ್‌ಡಿ ಕಾರ್ಯಪಾಲಕ ಅಭಿಯಂತರ ನಾರಾಯಣಸ್ವಾಮಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಭಿಯಂತರ ಜೆಬಿ ಉಲ್ಲಾಬೇಗ್, ಮಾಸ್ತಿ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್, ಪುರಸಭೆ ಮುಖ್ಯ ಅಧಿಕಾರಿ ಎಬಿ ಪ್ರದೀಪ್, ಬಿ ಇ ಒ ಚಂದ್ರಕಲಾ, ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಆನ್ಸರ್ ಭಾಷ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೈರಾರೆಡ್ಡಿ, ಮಾಸ್ತಿ ಗ್ರಾಮ ಅಧ್ಯಕ್ಷ ಲಕ್ಷ್ಮಮ್ಮ, ಉಪಾಧ್ಯಕ್ಷ ಚೇತನ್, ಪಿಡಿಒ ನವೀನ್, ಕೃಷಿ ಇಲಾಖೆಯ ಮಂಜುನಾಥ್, ತೋಟಗಾರಿಕೆ ಇಲಾಖೆಯ ದಿವ್ಯ, ಆರೋಗ್ಯ ಇಲಾಖೆಯ ರಮೇಶ್ ಬಾಬು, ಸರಸ್ವತಿ, ವಿಸ್ತಾರಣಾಧಿಕಾರಿ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಶಿವಕುಮಾರ್, ಮೀನುಗಾರಿಕೆ ಇಲಾಖೆಯ ಪೆದ್ದಣ್ಣ, ಇನ್ನಿತರರು ಹಾಜರಿದ್ದರು.