ಉತ್ತಮ ಸೇವೆಗೈದ ಪೊಲೀಸರಿಗೆ ಪ್ರಶಂಸೆ, ಸನ್ಮಾನ
ಕೆಜಿಎಫ್.ಜು.೧೪-ಕೆಜಿಎಫ್ ಪೊಲೀಸ್ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಶ್ಲಾಘಿಸಿ, ಗೌರವಿಸಿದ್ದಾರೆ..
ಚಾಂಪಿಯನ್‌ರೀಫ್ಸ್‌ನಲ್ಲಿನ ಡಿಎಆರ್ ಕವಾಯತು ಮೈದಾನದಲ್ಲಿ ಶುಕ್ರವಾರದಂದು ಬೆಳಿಗ್ಗೆ ಏರ್ಪಡಿಸಿದ್ದ ವಾರದ ಕವಾಯತು ಸಂದರ್ಭದಲ್ಲಿ ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೊಲೀಸರನ್ನು ಗುರುತಿಸಿ ಸನ್ಮಾನಿಸಲಾಯಿತು.
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರೂ: ೧೦ ಲಕ್ಷ ಮೌಲ್ಯದ ೧೧ಕೆಜಿ ೨೦೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಪಿಎಸ್‌ಐ ಬಿ.ಮಂಜುನಾಥ, ಎಎಸ್‌ಐ ರಮೇಶ್, ಸಿಬ್ಬಂದಿಗಳಾದ ವೆಂಕಟೇಶ್, ಮಂಜಪ್ಪ, ಸುನಿಲ್‌ಕುಮಾರ್, ಲೋಕೇಶ್, ನಂದಿತಾ, ಜಾಕೀರ್‌ಹುಸೇನ್ ಅವರುಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಮತ್ತೊಂದು ಗಾಂಜಾ ಪ್ರಕರಣದಲ್ಲಿ ರೂ: ೨೬ ಲಕ್ಷ ಮೌಲ್ಯದ ೩೩ಕೆಜಿ ೫೧೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸಿಪಿಐ ಸಿ.ಹೆಚ್. ರಾಮಕೃಷ್ಣಯ್ಯ, ಪಿಎಸ್‌ಐ ಚೇತನ್‌ಕುಮಾರ್, ಸಿಬ್ಬಂದಿಗಳಾದ ವೆಂಕಟೇಶ್, ಮಂಜಪ್ಪ, ಶಶಿಕುಮಾರ್, ಲೋಕೇಶ್, ಆರ್.ರಾಜೇಂದ್ರ ಅವರುಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಪೊಲೀಸರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಶ್ಲಾಘಿಸಿ ಮಾತನಾಡಿದರು. ಪ್ರಸ್ತುತ ತಮ್ಮ ಅತ್ಯುತ್ತಮ ಸೇವೆಯ ಮೂಲಕ ಪ್ರಶಂಸೆಗೆ ಪಾತ್ರರಾಗಿರುವ ಅಧಿಕಾರಿ, ಸಿಬ್ಬಂದಿಗಳು ಎಲ್ಲರಿಗೂ ಮಾದರಿಯಾಗಿದ್ದು, ಇವರಂತೆಯೇ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವವರು ಸರ್ಕಾರಿ ಸೇವೆಯನ್ನು ನಿಷ್ಠೆಯಿಂದ ಮತ್ತು ಕಾರ್ಯತತ್ಪರತೆಯಿಂದ ಜನರ ರಕ್ಷಣೆ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ಪಣ ತೊಡಬೇಕು, ಉತ್ತಮವಾದ ರೀತಿಯಲ್ಲಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಸ್.ಪಾಂಡುರಂಗ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಸ್.ಟಿ.ಮಾರ್ಕೋಂಡಯ್ಯ, ಜಿ.ಸಿ.ನಾರಾಯಣಸ್ವಾಮಿ, ವೈ.ಆರ್.ರಂಗಶಾಮಯ್ಯ, ಲಕ್ಷ್ಮೀನಾರಾಯಣ, ನವೀನ್‌ಕುಮಾರ್, ಆರ್‌ಪಿಐ ವಿ.ಸೋಮಶೇಖರ್ ಭಾಗವಹಿಸಿದ್ದರು.