ಕನ್ನಡ ವಿವಿಯಲ್ಲಿ ವಾರದ ಮಾತು ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು14: ಜನ ಬಳಕೆಯಲ್ಲಿ ಮಹಾಪ್ರಾಣ ಧ್ವನಿಗಳು ಅಲ್ಪಪ್ರಾಣಗಳಾಗಿ ಬಳಕೆಯಲ್ಲಿವೆ ಎಂದು ಸಂಶೋಧನಾರ್ಥಿ ದಿನೇಶ್ ಎಸ್. ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಹಮ್ಮಿಕೊಂಡಿದ್ದ ವಾರದ ಮಾತು ಆನ್‍ಲೈನ್ ಕಾರ್ಯಕ್ರಮದಲ್ಲಿ ‘ಕುಲಕಸುಬುಗಳ ಪದ ವಿನ್ಯಾಸ’ ಎಂಬ ವಿಷಯದ ಕುರಿತು ಮಾತನಾಡಿದ ಅವರು ತುಮಕೂರು, ಶಿರಾ ತಾಲೂಕುಗಳಲ್ಲಿ ಕಂಡುಬರುವ ಕುಂಬಾರ ಸಮುದಾಯದ ಕುಲಕಸುಬು ಕುರಿತು ಕುಂಬಾರರನ್ನು ಕುಂಭಕರು, ಕುಂಬಿಗ, ಗುಂಬಿಗಶೆಟ್ಟಿ ಮತ್ತು ಕುಂಬಾರ, ಕುಂಬಾರಸಾಲಿ ಎಂದು, ಸ್ತ್ರೀವಾಚಕವಾಗಿ ಕುಂಬಾರಗಿತ್ತಿ, ಕುಂಬಾರತಿ ಬಳಕೆಯಲ್ಲಿವೆ ಎಂದರು.
ತಿಗುರಿ, ಅವಿಗೆ, ಸೊಳಾ, ಬಾಳಿ, ಬುಡ್ಡು, ವಾಡೆ, ತಿಗರಿಕೋಲು, ಸಾಲುದೀಪ, ಕಾಲುದೀಪ, ಮೇಲ್‍ದೀಪ, ಕುಡಿಕೆ, ಗಡಿಗೆ, ಅಡಕಲುಗಡಿಗೆ ಕುಂಬಾರ ವೃತ್ತಿಯಲ್ಲಿ ಬಳಕೆಯಲ್ಲಿರುವ ಪದಗಳನ್ನು ಸಾಮಾಜಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು. ಧಾರೆ-ದಾರೆ, ತಿಥಿ-ತಿತಿ, ದೃಷ್ಠಿ-ದಿಷ್ಟಿ ಹೀಗೆ ಕುಂಬಾರರ ಕನ್ನಡ ಮಾತಿನಲ್ಲಿ ಮಹಾಪ್ರಾಣ ಧ್ವನಿಗಳು ಅಲ್ಪಪ್ರಾಣಗಳಾಗಿ ಉಚ್ಚಾರಣೆಯಲ್ಲಿರುವುದನ್ನು ಉದಾಹರಣೆ ಸಹಿತ ಮಂಡಿಸಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ.ಪಿ ಮಹಾದೇವಯ್ಯ, ಸಂಶೋಧನಾ ವಿದ್ಯಾರ್ಥಿ ವಿಶ್ವನಾಥ ಟಿ. ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕ ಚೆಂದಸ್ವಾಮಿ ವಿ. ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.