ಶವ ಸಂಸ್ಕಾರಕ್ಕೆ ನಿವೇಶನ ಹಾಗೂ ಮೂಲಸೌಕರ್ಯಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು14: ಕಾರಿಗನೂರು ಗ್ರಾಮಸ್ಥರು ಶವಸಂಸ್ಕಾರ ನಡೆಸಲು ಸಾರ್ವಜನಿಕ ರುದ್ರಭೂಮಿಗೆ ನಿವೇಶನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಕರುನಾಡು ಕಲಿಗಳ ಕ್ರೀಯಾಶೀಲ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾರಿಗನೂರು ಗ್ರಾಮಸ್ಥರು ಈಗಾಗಲೇ ಗುರುತಿಸಿರುವ ಸರ್ವೆ 180/2 ಭೂಮಿಯಲ್ಲಿ ಸುತ್ತಲು ಕಾಂಪೌಂಡ್ ಗೋಡೆ ನಿರ್ಮಿಸಬೇಕು. ಈ ಪ್ರದೇಶದಲ್ಲಿ ತಗ್ಗುಗುಂಡಿಗಳನ್ನು ಮುಚ್ಚಿ ಸಮತಟ್ಟುಗೊಳಿಸಬೇಕು. ಕೊಳವೆಬಾವಿ ಹಾಕಿಸಿ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಕೊಠಡಿಯೊಂದನ್ನು ನಿರ್ಮಾಣ ಮಾಡಿ ಸ್ಥಳದಲ್ಲಿ ಮರಣ ಪ್ರಮಾಣ ಪತ್ರ ನೋಂದಣಿ ಮತ್ತು ವಿತರಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ, ಕಾರಿಗನೂರು ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ವಿಜಯನಗರ ಸಾಹಿತ್ಯ ಪರಿಷತ್ತು, ಶ್ರೀ ಮಾರೆಮ್ಮ ದೇವಿ ಸೇವಾ ಟ್ರಸ್ಟ್, ಲಾರಿ ಮಾಲೀಕರ ಸಂಘ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಸಹಯೋಗದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಿದರು. 
ಮುಖಂಡರಾದ ಪಿ.ವೆಂಕಟೇಶ್, ಪರಮೇಶ್ವರ ಗೌಡ, ಗುಜ್ಜಲ್ ಗಣೇಶ್, ಎಸ್.ಯರಿಸ್ವಾಮಿ, ಬಾಲ್ಯಸಾಬ್, ಹುಲುಗಪ್ಪ, ವದ್ದಟ್ಟಿ ಸುಂಕಪ್ಪ, ಮದುರಚೆನ್ನಶಾಸ್ತ್ರಿ, ಗಂಟೆ ಸೋಮಶೇಖರ, ಬೋಡ ರಾಮಪ್ಪ, ಹೊನ್ನೂರಸ್ವಾಮಿ, ದೊಡ್ಡ ಬಜಾರೆಪ್ಪ, ವಿ.ರಂಗಯ್ಯ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.