ತಂಬಾಕು,ಮಾದಕ ವಸ್ತುಗಳಿಂದ ದೂರವಿರಿ
ಕೋಲಾರ,ಜು,೧೪- ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ತಂಬಾಕು, ಮಾದಕ ವಸ್ತುಗಳಿಂದ ದೂರವಿರಿ, ಯುವಕರು ದೇಶದ ಆಸ್ತಿಯಾಗಲು ದುಶ್ಚಟಗಳಿಗೆ ಮನಸೋಲದಿರಿ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್ ಹೊಸಮನಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಕಾಲೇಜು ಶಿಕ್ಷಣ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರ ಆಶ್ರಯದಲ್ಲಿ ಎಂಎನ್‌ಜಿ ಪಿಯು ಕಾಲೇಜು, ಸ್ಮಾರ್ಟ್ ಪಿಯು ಕಾಲೇಜಿನಲ್ಲಿ ತಂಬಾಕು ಉತ್ಪನ್ನಗಳು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಂಬಾಕು ಉತ್ಪನ್ನಗಳ ಉದ್ದಿಮೆದಾರರು, ಮಾರಾಟಗಾರರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಕೊಟ್ಪಾ ಕಾಯ್ದೆಯನ್ನು ೨೦೦೩ರ ಕಾನೂನುಗಳನ್ನು ಪಾಲಿಸಬೇಕು ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕ ಸ್ಥಳದ ಮಾಲೀಕರು, ಮುಖ್ಯಸ್ಥರು ಕನಿಷ್ಠ ೬೦*೪೫ ಸೆ.ಮೀ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿರುತ್ತದೆ. ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಅಥವಾ ಪರೋಕ್ಷ ಜಾಹಿರಾತನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಪ್ರಾಪ್ತ ಮಕ್ಕಳಿಂದ ಮತ್ತು ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಶೈಕ್ಷಣಿಕ ಸಂಸ್ಥೆಗಳ ೧೦೦ ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ಕಡ್ಡಾಯವಾಗಿ ಹಿಂಬದಿ ಮತ್ತು ಮುಂಬದಿ ಎರಡು ಬದಿಯಲ್ಲಿ ಶೇ.೮೫ರಷ್ಟು ಆರೋಗ್ಯಕರ ಎಚ್ಚರಿಕೆಯ ಚಿಹ್ನೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಾಯಕ್ರಮದಲ್ಲಿ ಕೋಟ್ಪಾ ಮತ್ತು ಎನ್‌ಡಿಪಿಎಸ್ ಕಾಯಿದೆ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಸಹನ ಅಧ್ಯಕ್ಷತೆ ವಹಿಸಿದ್ದು, ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಮೇಲೆ ಉಂಟಾಗುವ ದುಷ್ಟಪರಿಣಾಮಗಳೆಂದರೆ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಧ್ವನಿ ಪೆಟ್ಟಿಗೆ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಕುರುಡುತನ, ಚರ್ಮವು ವಯಸ್ಸಾದಂತೆ ಕಂಡುಬರುವುದು, ದಂತಕ್ಷಯ ಉಂಟಾಗುತ್ತದೆ. ಧೂಮಪಾನವು ಪುರುಷರಲ್ಲಿ ವೀರ್ಯ ಉತ್ಪತ್ತಿಯನ್ನು ಕಡಿಮೆ ಮತ್ತು ವಿಕೃತಿಗೊಳಿಸುತ್ತದೆ. ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗುವುದು. ಗ್ಯಾಂಗ್ರಿನ್, ಹೃದಯಾಘಾತ, ಉಂಟಾಗುತ್ತದೆ ಎಂದು ತಿಳಿಸಿ ಅದರಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ ಮಂಜುನಾಥ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.