ಕಲಾವಿದರನ್ನು ಹುಟ್ಟುಹಾಕುವ ಜಿಲ್ಲೆ ಬಳ್ಳಾರಿ: ವಿ.ಟಿ.ಕಾಳೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.14: ಕಲಾವಿದರನ್ನು ಹುಟ್ಟುಹಾಕುವ ಜಿಲ್ಲೆ ಯಾವುದೇಂದರೆ ಅದು ಬಳ್ಳಾರಿ ಎಂದು ನಾಡೋಜ ವಿ.ಟಿ.ಕಾಳೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಇಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಸಂಭ್ರಮ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಕ್ಕೆ ಚಾಲನೆ ನೀಡಿ‌ ಮಾತನಾಡುತ್ತಿದ್ದರು. ಕಳೆದ 70 ವರ್ಷಗಳ ಹಿಂದೆಯೇ ಐವತ್ತಕ್ಕೂ ಹೆಚ್ಚು ಕಲಾವಿದರು ಪ್ರಸಿದ್ದರಾಗಿದ್ದರು. ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ತೊಗಲುಗೊಂಬೆ ಮೊದಲಾದ ಕಲಾ ಪ್ರಕಾರಗಳಿಂದ ಜಿಲ್ಲೆ ಖ್ಯಾತಿ ಪಡೆದಿದೆ.   ಬಳ್ಳಾರಿ ರಾಘವ, ಸಿರಿಗೇರಿ ನಾಗನಗೌಡ, ಸುಭ್ರದಮ್ಮ, ಬೆಳಗಲ್ಲು ವೀರಣ್ಣ, ಬಳ್ಳಾರಿ ಲಲಿತಮ್ಮ ಮೊದಲಾದವರ ಹೆಸರು ಪ್ರಸ್ಥಾಪಿಸಿ ಅವರು ಕಲಾ ಪ್ರಪಂಚಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.
ಸಾಂಸ್ಕೃತಿಕ ಸ್ಥಾನಮಾನದಿಂದ ದೇಶದ ಹಿರಿಮೆ ಹೆಚ್ಚುತ್ತದೆ. ಅದಕ್ಕಾಗಿ ಕಲೆಯನ್ನು ನಾವೆಲ್ಲ‌ಸೃಜನ ಶೀಲರಾಗಿ ಬೆಳೆಯಬೇಕು ಎಂದರು.
ಐಪಿಎಲ್ ಟೀಂ ರೀತಿ ನೀವೆಲ್ಲ ಒಗ್ಗಟ್ಟಿನ ಪ್ರದರ್ಶನ ಮುಖ್ಯ ಇದರಿಂದ ಸಂಘಟಿತ ಹೋರಾಟದಿಂದ ಸಂಘ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು, ಪರಸ್ಪರ ದ್ವೇಷ ಬೇಡ ಎಂದರು.
ಕಾರ್ಯಕ್ರಮದಲ್ಲಿ , ಬಳ್ಳಾರಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಚೆನ್ನಪ್ಪ, ಮರ್ಚೇಡ ಮಲ್ಲಿಕಾರ್ಜುನಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಮೊದಲಾದವರು ಇದ್ದರು. 
ಸ್ವಾಗತ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಶಂಕರಬಂಡೆ ಯಲ್ಲನಗೌಡ, ಪ್ರಾಸ್ತಾವಿಕವಾಗಿ ಮಾತನಾಡಿದ ರಂಗತೋರಣ ಸಂಸ್ಥೆಯ ಅಧ್ಯಕ್ಷ ಭೀಮಸೇನ, ಸುಭದ್ರಮ್ಮ ಮನ್ಸೂರು ಸೇರಿದಂತೆ ಅನೇಕ ಕಲಾವಿದರಿಂದ ಬಳ್ಳಾರಿ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ, ಕಲಾವಿದರಾದ ನಮ್ಮಲ್ಲಿ ಎಂದಿಗೂ ಒಡಕು ಮೂಡದಿರಲಿ. ಎಲ್ಲರೂ ಒಂದಾಗಿ ಕಲಾ ಲೋಕವನ್ನು ಮತ್ತಷ್ಟು ಮುಂದುವರಿಸಿಕೊಂಡು ಹೋಗುವ ಪ್ರಯತ್ನ ಮಾಡೋಣ ಎಂದರು. ವಿನೋದ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ನಂತರ ಇಡೀ ದಿನ ಹಾಡು, ಸಂಗೀತ, ಬಯಲಾಟ, ನೃತ್ಯ, ವಾದ್ಯ ಸಂಗೀತ ಮೊದಲಾದ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.