ರಾಮಾಯಣ ಶ್ರವಣದಿಂದ ಸನ್ಮಾರ್ಗಕ್ಕೆ ನಾಂದಿ
ಸತ್ತೂರು,ಜು.24: 13 :ಶ್ರೀಮದ್ ರಾಮಾಯಣ ಶ್ರವಣದಿಂದ ಸನ್ಮಾರ್ಗಕ್ಕೆ ನಾಂದಿಯಾಗುತ್ತದೆ. ಶ್ರೀರಾಮಚಂದ್ರ ದೇವರು ಧರ್ಮದ ಸಾಕಾರ ಮೂರ್ತಿ, ರಾಮಾಯಣ ಅನೇಕ ದೇವತೆಗಳ, ನದಿಗಳ , ರಾಜರ , ಚರಿತ್ರೆಯನ್ನು ತಿಳಿಸುತ್ತದೆ. ರಾಮಚಂದ್ರ ದೇವರು ರಾಜನಾಗಿ , ಅಣ್ಣನಾಗಿ, ಮಿತ್ರನಾಗಿ , ಶತ್ರುವಾಗಿ, ಮಗನಾಗಿ, ಗಂಡನಾಗಿ, ಹೀಗೆ ಮುಂತಾದ ಅನೇಕ ಸಂಬಂಧಗಳನ್ನು , ಜೀವನದಲ್ಲಿ ಹೇಗೆ ವ್ಯವಹಾರ ಮಾಡಬೇಕು ,ಯಾವುದು ಹಿತ, ಹೇಗೆ ಮಾಡಿದರೆ ಸುಖ ದುಃಖಗಳಾಗುತ್ತವೆ ಎಂದು ವಾಲ್ಮೀಕಿ ಮಹರ್ಷಿಗಳು ಸುಂದರವಾಗಿ ರಾಮಾಯಣದ ಮೂಲಕ ಅದ್ಭುತವಾದ ಸಂದೇಶ ಕೊಟ್ಟಿದ್ದಾರೆ ಎಂದು ಜಗದ್ಗುರುಗಳಾದ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರು ಅನುಗ್ರಹ ಸಂದೇಶ ನೀಡಿದರು.
ಸತ್ತೂರಿನ ನಾರಾಯಣ ನಾರಾಯಣ ಬಳಗದ ಆಶ್ರಯದಲ್ಲಿ ರಾಜಾಜಿನಗರದಲ್ಲಿರುವ ರಘೋತ್ತಮ ಅವಧಾನಿ ನಿವಾಸದಲ್ಲಿ ಹಮ್ಮಿಕೊಂಡಿರುವ ಸಂವತ್ಸರ ಪರ್ಯಂತ ಶ್ರೀಮದ್ ರಾಮಾಯಣ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ ,ರಾಮದೇವರ ಮಹಿಮೆ , ಕಥಾ ಶ್ರವಣದಿಂದ ಮೋಕ್ಷದ ದಾರಿ ತೋರಿಸುತ್ತದೆ. ಯಾರಿಗೂ ಮೋಸ , ವಂಚನೆ ಮಾಡಬಾರದು ,ಸುಳ್ಳು ಹೇಳಬಾರದು ,ಸತ್ಯವಾಗಿ ನುಡಿದರು ವ್ಯರ್ಥವಾದದ್ದನ್ನ ಹೇಳಬಾರದು, ನಮ್ಮ ನಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದುಕೊಳ್ಳಲು ರಾಮಾಯಣದ ಶ್ರವಣ ಅತ್ಯಂತ ಅವಶ್ಯ. ದೇವರ ಮಹಿಮೆ , ಹಿರಿಯರ ಆದರ್ಶಗಳು ಮುಂತಾದ ಸಂಗತಿಗಳಿಂದ ಪುಣ್ಯ ಸಂಪಾದನೆ ಆಗುತ್ತದೆ ಎಂದು ಸುಂದರವಾಗಿ ರಾಮಾಯಣ ಸಂದೇಶದ ಅನುಗ್ರಹ ನೀಡಿದರು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಹನುಮಂತ ಪುರಾಣಿಕ, ವಾದಿರಾಜ ಆಚಾರ್, ಎಲ್.ವಿ ಜೋಶಿ ,ಸಂಜೀವ ಗೊಳಸಂಗಿ, ವಿಲಾಸ ಸಬನೀಸ, ಆನಂದ ದೇಶಪಾಂಡೆ, ಡಾ.ಶ್ರೀನಾಥ, ಸಂಜೀವ್ ಜೋಶಿ, ನಾಗೇಶ ನರಸಾಪುರ, ಎಂ.ಆರ್ ಕಲಕೋಟಿ, ಅಶೋಕ್ ಕುಲಕರ್ಣಿ, ಪ್ರಕಾಶ್ ದೇಸಾಯಿ, ಪ್ರಶಾಂತ್ ಕುಲಕರ್ಣಿ ಅಶೋಕ ಕುಲಕರ್ಣಿ, ಬಹದ್ದೂರ್ ದೇಸಾಯಿ ಉಪಸ್ಥಿತರಿದ್ದರು.