ತಗ್ಗು-ಗುಂಡಿಗಳ ರಸ್ತೆ: ಜನ ಹೈರಾಣ
ಚನ್ನಮ್ಮನ ಕಿತ್ತೂರು,ಜು14: ಸರ್ಕಾರದ ಜೆಜಿಎಂ ಯೋಜನೆ ಜನರಲ್ಲಿ ಸಂತಸ ತಂದಿದೆ. ಆದರೆ ಗ್ರಾಮೀಣ ಭಾಗದಲ್ಲಿ ಪೈಪ್‍ಲೈನ್ ಅಗೆದಿರುವ ತಗ್ಗು-ಗುಂಡಿಗಳಿಂದ ರಸ್ತೆಗಳು ಹಾಳಾಗಿವೆ. ಜನರು ಅಲ್ಲಿ ಓಡಾಡಬೇಕಾದರೆ ಹೈರಾಣಾಗುತ್ತಿದ್ದಾರೆ.
ಸಮೀಪದ ಖಾನಾಪೂರ ತಾಲೂಕಿನ ಇಟಗಿ ಗ್ರಾಮ ಸೇರಿದಂತೆ ಇನ್ನುಳಿದ ಗ್ರಾಮದಲ್ಲಿ ಹಾಯ್ದುಹೋಗುವ ರಸ್ತೆಗಳು ತೀರಾ ಹದಗೆಟ್ಟದ್ದರಿಂದ ಬೈಕ್-ವಾಹನ ಸವಾರರು ಹಗ್ಗದ ಮೇಲೆ ಡೊಂಬರಾಟ ಮಾಡಿ ಸಾಗುವಂತಾಗಿದೆ.
ಬೆಕವಾಡ, ಗಂದಿಗವಾಡ ಮಾರ್ಗಗಳ ಕಡೆಯಿಂದ ಇಟಗಿ ಗ್ರಾಮದ ಬಜಾರೆ ಪೇಟೆ ದೊಡ್ಡೋಣೆ, ಬಡಿಗೇರ ಬೀದಿಯಿಂದ ಜಿಮು ರಸ್ತೆ ಗ್ರಾಮ ಮುಕ್ತಾಯದ ವರೆಗಿನ ರಸ್ತೆ ಹದಗೆಟ್ಟಿದ್ದರಿಂದ ವಾಹನ ಸವಾರರು ನಿಧಾನವಾಗಿ ಸಾಗಬೇಕಾಗಿದೆ. ಈ ರಸ್ತೆ ಪಾರಿಶ್ವಾಡ ಮಾರ್ಗವಾಗಿ ಖಾನಾಪೂರ-ಗೋವಾ ಸೇರುವ ರಸ್ತೆ. ಇತ್ತ ಕಡೆಯಿಂದ ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ ರಸ್ತೆ ಇದು. ದ್ವಿಚಕ್ರ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಬಿದ್ದ ಉದಾಹರಣೆಗಳು ಹಲವಾರು ಇವೆ. ಈಗಾಗಲೇ ಲೋಕೋಪಯೋಗಿ ಅಧಿಕಾರಿಗಳಿಗೆ ರಸ್ತೆ ದುರಸ್ಥಿಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿ ಅರ್ಜಿ ಸಲ್ಲಿಸಿದರು ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ರಸ್ತೆ ದುರಸ್ಥಿಗೊಳಿಸದ್ದಿದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.