ಡೆಂಗ್ಯೂ ನಿಯಂತ್ರಣಕ್ಕೆ ಸನ್ನದ್ದರಾಗೋಣ
ಬಾಗಲಕೋಟೆ,ಜು14 : ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಡೆಂಗ್ಯೂ ನಿಯಂತ್ರಣ ಕಾರ್ಯಕ್ಕೆ ಎಲ್ಲರೂ ಸನ್ನದ್ದರಾಗೋಣ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ನವನಗರದ ವಾರ್ಡ ನಂ.22, ವಾಂಬೆ ಕಾಲೋನಿಯಲ್ಲಿ ಡೆಂಗ್ಯೂ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಲಾರ್ವ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು ಮನೆಯ ಸುತ್ತಮುತ್ತ ನೀರಿನ ಮೂಲಕ ಸ್ವಚ್ಚಗೊಳಿಸಬೇಕಿದೆ. ನಗರದ ವ್ಯಾಪ್ತಿಯಲ್ಲಿ ಶನಿವಾರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಶುಕ್ರವಾರ ಸ್ವಚ್ಚ ವಾರ್ಡ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಸಾರ್ವಜನಿಕರು ಪಾಲ್ಗೊಂಡು ಜಾಗೃತಗೊಳ್ಳುವದರ ಜೊತೆಗೆ ಇತರರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಬರುವ ಆಗಸ್ಟ ವರೆಗೆ ಸಾಂಕ್ರಾಮಿಕ ರೋಗ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದ್ದು, ತಮ್ಮ ಮನೆಯ ಕಸ ನಿರ್ವಹಣೆಯಿಂದ ಪ್ರಾರಂಭಗೊಳ್ಳಬೇಕು. ಸ್ವಚ್ಛತೆ ಹಾಗೂ ಚರಂಡಿಗಳ ಸ್ವಚ್ವತೆ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಚರಂಡಿ ಸ್ವಚ್ಚವಿದ್ದರೆ ಅರ್ದದಷ್ಟು ಕಾಯಿಲೆಗಳು ಬರುವದಿಲ್ಲ. ಆದ್ದರಿಂದ ಚರಂಡಿಯಲ್ಲಿ ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಇತರೆ ವಸ್ತುಗಳು ಹಾಕಬಾರದು. ಆ ಒಣ ಕಸವನ್ನು ನಗರಸಭೆಯಿಂದ ಬರುವ ಸ್ವಚ್ಛ ವಾಹಿನಿಗೆ ಹಾಕಬೇಕು. ಇದರಿಂದ ಸಮುದಾಯ ಸ್ವಚ್ವವಾಗಿರುವದಲ್ಲದೇ ಆರೋಗ್ಯ ಕೂಡಾ ಸ್ವಚ್ಚವಾಗಿರುತ್ತದೆ ಎಂದು ಹೇಳಿದರು.
ಈ ಕಾರ್ಯದಲ್ಲಿ ನಗರಸಭೆಯ ಜೊತೆಗೆ ಸಾರ್ವಜನಿಕರು ಕೈ ಜೋಡಿಸುವ ಅಗತ್ಯವಿದೆ. ಅಂದಾಗ ಮಾತ್ರ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮವಹಿಸಲು ಸಾಧ್ಯವಾಗುತ್ತದೆ. ಇದು ಕೇವಲ ಒಂದೇ ಇಲಾಖೆಗೆ ಸಂಬಂಧಿಸಿದಲ್ಲ. ಎಲ್ಲರ ಸಹಭಾಗಿತ್ವದಲ್ಲಿ ಆಗಬೇಕಾದ ಕಾರ್ಯವಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ಹರಡದಂತೆ ಜಾಗೃತ ಅಭಿಯಾನದಲ್ಲಿ ಎಲ್ಲ ಭಾಗವಹಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.
ಪ್ರಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ ಶುದ್ದ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗುತ್ತಿದೆ. ಆ ಉತ್ಪತ್ತಿಯನ್ನು ತಡೆಯಬೇಕಾದರೆ ನೀರು ಸಂಗ್ರಹದ ಮೇಲೆ ಮುಚ್ಚುವ ಕೆಲಸ ಮಾಡಬೇಕು. ಅದಕ್ಕಾಗಿ ನಗರ ಗ್ರಾಮೀಣಾದಾದ್ಯಂತ ವಾರ್ಲಾ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ. ಬಾಗಲಕೋಟೆ ನಗರದ 35 ವಾರ್ಡಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲಾಗುತ್ತಿದೆ. ಇದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿಯ ಕರಪತ್ರಗಳನ್ನು ಹಂಚಲಾಗುತ್ತಿದೆ. ಈ ಕಾರ್ಯದಲ್ಲಿ ಸಮುದಾಯ ಜನ ಸಹ ಕೈ ಜೋಡಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್. ಸೇರಿದಂತೆ ಇತರರು ಉಪಸ್ಥಿತರಿದ್ದರು.