ಮಕ್ಕಳ ಮನೋಭಾವಕ್ಕೆ ತಕ್ಕಂತೆ ಬೋಧನೆ ಮಾಡಿ : ಬಿಇಒ ದೊಡ್ಡೆ
ಔರಾದ್ :ಜು.14: ಮಕ್ಕಳ ಮನಸ್ಸಿನಲ್ಲಿ ಕಲಿಕೆಯ ಪೂರಕ ವಾತಾವರಣ ಕಲ್ಪಿಸುವುದರ ಜೊತೆಗೆ ಕಲಿಕೆಯ ಬಗ್ಗೆ ಮಕ್ಕಳ ಮನೋಭಾವಕ್ಕೆ ತಕ್ಕಂತೆ ಶಿಕ್ಷಕರು ಬೋಧನೆ ಮಾಡಬೇಕೆಂದು ಬಿಇಒ ಟಿ.ಆರ್ ದೊಡ್ಡೆ ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ನೂತನ ಜಿಪಿಟಿ ಶಿಕ್ಷಕರಿಗೆ ಹಮ್ಮಿಕೊಂಡ ಒಂದು ದಿನದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಸರಕಾರಿ ಶಾಲೆಗಳ ಮೇಲೆ ಪಾಲಕರ ಆಸಕ್ತಿ ಕಡಿಮೆ ಆಗಬಾರದು. ಶಿಕ್ಷಣ ಇಲಾಖೆಗೆ ಸರಕಾರ ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದೆ. ಅವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು. ಗ್ರಾಮೀಣ ಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದೆ. ಅವರ ಮಾತುಗಳನ್ನು ಗ್ರಾಮೀಣರು ಮತ್ತು ವಿದ್ಯಾರ್ಥಿಗಳು ಕೇಳುತ್ತಾರೆ. ಆದ್ದರಿಂದ ಶಿಕ್ಷಕರು ಆದರ್ಶ ಗುಣಗಳಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಪ್ರಾಂಶುಪಾಲ ಡಾ.ಹೆಚ್.ಬಿ.ಭರಶೆಟ್ಟಿ ಮಾತನಾಡಿ, ಗುರು ಮತ್ತು ವಿದ್ಯಾರ್ಥಿಗಳ ನಡುವೆ ಶಾಶ್ವತವಾದ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಕೂಡಿದ ಸಂಬಂಧ ಏರ್ಪಡಬೇಕು ಎಂದರು. ಶಿಕ್ಷಕ ದೇಶದ ರಾಷ್ಟ್ರಪತಿ ಆಗಬಹುದು ಎಂಬುದನ್ನು ರಾಧಾಕೃಷ್ಣನ್ ತೋರಿಸಿಕೊಟ್ಟಿದ್ದಾರೆ. ದೇಶದ ಎಲ್ಲೆಡೆ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಶಿಕ್ಷಕರ ಕಾರ್ಯ ಸಾಕಷ್ಟು ಮಹತ್ವ ಪಡೆದಿದೆ. ಈ ಮೊದಲು ಶಿಕ್ಷಣ ಕೇವಲ ಕಲಿಕೆಗೆ ಮಾತ್ರ ಸೀಮಿತವಾಗಿತ್ತು. ಜಾಗತೀಕರಣದ ನಂತರ ವಿಶ್ವದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವ ಮಾನವನಾಗಿ ಬೆಳೆಯಬಹುದಾಗಿದೆ ಎಂದು
ತಿಳಿಸಿದರು.
ಸ್ಕೌಟ್ ರಾಜ್ಯ ತರಬೇತಿದಾರ ಬಾಬುರಾ ನಿಂಬೂರೆ, ಗೈಡ್ಸ್ ಆಂಡ್ ಬುಲ್ ಬುಲ್ ರಾಜ್ಯ ಸಂಘಟಿಕರಾದ ಅನಿಲ್ ಶಾಸ್ತ್ರಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖವಾದ ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ, ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕ ಶಾಲಿವಾನ ಉದಗೀರೆ, ಆದರ್ಶ ವಿದ್ಯಾಲಯ ಶಾಲೆಯ ಪ್ರಾಂಶುಪಾಲ ಧೂಳಪ್ಪ ಮಳೆನೂರ ಸೇರಿದಂತೆ ನೂತನ ಶಿಕ್ಷಕರು ಪಾಲ್ಗೊಂಡಿದ್ದರು.