ವ್ಯವಹಾರ ಶಿಸ್ತಿನಿಂದಿದ್ದರೆ ಮಾತ್ರ ಪ್ರಗತಿ ಸಾಧ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.14:- ಹಣಕಾಸಿನ ವ್ಯವಹಾರವನ್ನು ಶಿಸ್ತಿನಿಂದ ನಿರ್ವಹಣೆ ಮಾಡಬೇಕು. ಆಗ ಮಾತ್ರ ವ್ಯಕ್ತಿಯಾಗಿ ಮತ್ತು ಉದ್ದಿಮೆದಾರರಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ವಿಆರ್‍ಎಲ್ ಸಮೂಹ ಸಂಸ್ಥೆಗಳ ಛೇರ್ಮನ್, ಪದ್ಮಶ್ರೀ ಪುರಸ್ಕೃತ ಡಾ.ವಿಜಯ ಸಂಕೇಶ್ವರ ಹೇಳಿದರು.
ನಗರದ ಕಾಸ್ಮೋಪಾಲಿಟನ್ ಕ್ಲಬ್‍ನಲ್ಲಿ ಗುರುವಾರ ಆಯೋಜಿಸಿದ್ದ ಭಗವತಿ ಚಿಟ್ಸ್ ಸಂಸ್ಥೆಯ ಮೈಸೂರು ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಣಕಾಸಿನ ನಿರ್ವಹಣೆಗೆ ಚಾಣಾಕ್ಷತನ ಅಗತ್ಯವಾಗಿ ಬೇಕು. ಅದರೊಂದಿಗೆ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದರು.
ಜೀವನದಲ್ಲಿ ದುಡ್ಡು ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆದರೆ, ದುಡ್ಡೇ ಜೀವನವಲ್ಲ. ಅದು ಒಂದು ಭಾಗವಷ್ಟೆ. ಹೂಡಿಕೆ ಮಾಡುವ ಹಣವು ದ್ವಿಗುಣ, ತ್ರಿಗುಣವಾಗಿ ಬೆಳೆಯಬೇಕೆಂಬ ಅತಿಯಾದ ಆಸೆ ಇರುತ್ತದೆ. ಇದು ಸರಿಯಲ್ಲ. ಹಣಕಾಸಿನ ಸಂಸ್ಥೆ ಯಾರ ಕೈಯಲ್ಲಿ ಇದೆ ಎಂಬುದನ್ನು ಗ್ರಾಹಕರು ಸೂಕ್ಷ್ಮವಾಗಿ ಗಮನಿಸಬೇಕು. ಬಳಿಕ ಅಂತಹ ಸಂಸ್ಥೆಯೊಂದಿಗೆ ವ್ಯವಹಾರ ಮಾಡಬೇಕು ಎಂದೂ ಕಿವಿಮಾತು ಹೇಳಿದರು.
ಉದ್ಯಮ ಮತ್ತು ಹಣಕಾಸಿನ ವ್ಯವಹಾರದಲ್ಲಿ ಯಾವತ್ತು ಮೋಸ ಮತ್ತು ಸುಳ್ಳು ಹೇಳಬಾರದು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಹಣಕಾಸು ಸಂಸ್ಥೆಗಳು, ಬ್ಯಾಂಕ್‍ನಿಂದ ಇತಿಮಿತಿಯಲ್ಲಿ ಸಾಲ ಮಾಡಬೇಕು. ಸಾಲ ಮಾಡುವುದು ತಪ್ಪಲ್ಲ. ಅದನ್ನು ತೀರಿಸುವ ಸಾಮರ್ಥ್ಯ ಇರಬೇಕು. ಅದಿಲ್ಲದಿದ್ದರೂ ಬೆಳೆಸಿಕೊಳ್ಳಬೇಕು. ವಿಆರ್‍ಎಲ್ ಸಂಸ್ಥೆಯ ಆರಂಭದ ದಿನಗಳಲ್ಲಿ ನಾನು ಸಹ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿ ಉದ್ಯಮವನ್ನು ಬೆಳೆಸಿದೆ. ಆದರೀಗ ಸಾಲ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಸಾಲವನ್ನು ಯಾವುದಕ್ಕೆ, ಏಕೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.
ವಿಆರ್‍ಎಲ್ ಸಂಸ್ಥೆಯ ಹಳೇ ದಿನಗಳನ್ನು ಮೆಲುಕು ಹಾಕಿದ ವಿಜಯ ಸಂಕೇಶ್ವರ ಅವರು, ದಾವಣಗೆರೆಯಲ್ಲಿದ್ದ ನಮ್ಮ ಸಂಸ್ಥೆಯ ಗೋದಾಮಿಗೆ ಬೆಂಕಿ ಬಿದ್ದು 2 ಕೋಟಿ ರೂ. ನಷ್ಟವಾಯಿತು. ಉದ್ಯಮವನ್ನು ಸ್ಥಾಪಿಸಿ ಪ್ರಾರಂಭಿಕ ದಿನದಲ್ಲೇ ಇಂತಹವೊಂದು ಕಠಿಣ ಕಷ್ಟ ಎದುರಾಯಿತು. ಆ ಕಾಲದಲ್ಲಿ ಅದು ದೊಡ್ಡ ಮೊತ್ತ. 5 ಸಾವಿರ ರೂ. ಹೊಂದಿಸುವುದು ಸಹ ಕಷ್ಟಕರವಾಗಿತ್ತು. ನಾನು ಆರು ತಿಂಗಳು ಸಮಯ ತೆಗೆದುಕೊಂಡು ಬಡ್ಡಿ, ಚಕ್ರಬಡ್ಡಿ ಸಹಿತವಾಗಿ ಎಲ್ಲ ಸಾಲವನ್ನು ಹಂತ ಹಂತವಾಗಿ ತೀರಿಸಿದೆ ಎಂದು ಸ್ಮರಿಸಿಕೊಂಡರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಪತ್ರಕರ್ತನಾಗಿ ಬೆಳೆಯಲು ವಿಜಯ ಸಂಕೇಶ್ವರ ಅವರು ತಮ್ಮ ಪತ್ರಿಕೆಯ ಮೂಲಕ ವೇದಿಕೆ ಕಲ್ಪಿಸಿಕೊಟ್ಟರು. ಇದುವೇ ಮುಂದೆ ರಾಜಕೀಯ ಅವಕಾಶವನ್ನೂ ನೀಡಿತು. ಸಂಕೇಶ್ವರ ಅವರು ನಾನು ಅಷ್ಟೇ ಅಲ್ಲ, ನನ್ನಂತೆ ನೂರಾರು ವ್ಯಕ್ತಿಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರು ಅನೇಕ ಜನರು ವೃತ್ತಿ, ವೈಯಕ್ತಿಕ ಜೀವನದಲ್ಲಿ ಪ್ರಗತಿ ಸಾಧಿಸಲು ವೇದಿಕೆ ನೀಡಿದ್ದಾರೆ ಎಂದು ಸ್ಮರಿಸಿದರು.
ಹಠ ಹಿಡಿದ ಕೆಲಸವನ್ನು ಮಾಡಿ ತೋರಿಸುವ ಶಕ್ತಿ ಸಂಕೇಶ್ವರ ಅವರಿಗೆ ಇದೆ. ಇದನ್ನು ಅನೇಕ ಸಲ ಸಾಬೀತು ಮಾಡಿದ್ದಾರೆ. 3 ದಶಕಗಳ ಹಿಂದೆ ಹೊಸ ಪತ್ರಿಕೆಗಳಿಗೆ ಅವಕಾಶವಿಲ್ಲದ ಸಂದರ್ಭದಲ್ಲಿ ಹೊಸ ಪತ್ರಿಕೆಯನ್ನು ಸ್ಥಾಪಿಸಿ ಯಶಸ್ಸು ಸಾಧಿಸಿದರು.
12 ಕಡೆ ಬ್ಯೂರೋ ತೆಗೆದು, ಅಲ್ಲೆಲ್ಲ ಮುದ್ರಣ ವ್ಯವಸ್ಥೆ ಮಾಡಿ, ಜಿಲ್ಲೆಗೊಂದು ಆವೃತ್ತಿಯನ್ನೂ ಪ್ರಾರಂಭಿಸಿ ಪತ್ರಿಕೋದ್ಯಮದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣರಾದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಮಣಶ್ರಿ ಸಮೂಹ ಸಂಸ್ಥೆ ಛೇರ್ಮನ್ ಎಸ್.ಷಡಕ್ಷರಿ, ಎಪಿಎನ್ ಪ್ರಾಪರ್ಟೀಸ್‍ನ ವ್ಯವಸ್ಥಾಪಕ ಪಾಲುದಾರ ಎ.ಪಿ.ನಾಗೇಶ್, ಉದ್ಯಮಿ ಬಿ.ಎನ್.ನಾಗೇಂದ್ರಪ್ರಸಾದ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಕಲ್ಯಾಣ ಮಾಲೀಕರ ಸಂಘದ ಅಧ್ಯಕ್ಷ ಎಸ್.ಮೂರ್ತಿ, ಭಗವತಿ ಚಿಟ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಕರುಣಾಕರ ಶೆಟ್ಟಿ, ನಿರ್ದೇಶಕ ಪಿ.ರವಿ, ಆರ್.ರಘು, ಭವ್ಯರಘು ಇತರರಿದ್ದರು.