ವಿಜಯೇಂದ್ರ ಬಂಧನ ಖಂಡಿಸಿ ಬಿಜೆಪಿ ಯುವ ಮೋರ್ಚಾದಿಂದ ಪಂಜಿನ ಮೆರವಣಿಗೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 14- ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಹಾಗೂ ಸರ್ಕಾರ ವಿರುದ್ದ ಪ್ರತಿಭಟಿಸಲು ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಂಧಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಸಾಯಂಕಾಲ ಪಂಜಿನ ಮೆರವಣಿಗೆ ಮಾಡಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಮೆರವಣಿಗೆ ಹೊರಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ವಿರುದ್ದ ಘೋಷಣೆಗಳನ್ನು ಕೂಗಿದರು. ತ್ಯಾಗರಾಜರಸ್ತೆಯ ಮಾರ್ಗವಾಗಿ ಭುವನೇಶ್ವರಿ ವೃತ್ತ ತಲುಪಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜು ಮಾತನಾಡಿ, ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್‍ರನ್ನು ಸಂಪುಟದಿಂದ ವಜಾಗೊಳಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ವಿರೋಧ ಪಕ್ಷಗಳ ಹಕ್ಕು. ಇದನ್ನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ. ಮತ್ತೊಂದು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುತ್ತಿದೆ ಎಂದು ದೂರಿದರು.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈಗ ಪತ್ನಿಗೆ ಹೆಸರಿಗೆ ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಪಡೆದುಕೊಂಡಿರುವುದು. ಅಲ್ಲದೇ ತಮ್ಮ ಅಪ್ತರಿಗೆ ಮುಡಾದಿಂದ ಅಕ್ರಮವಾಗಿ ನಿವೇಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಈ ಎಲ್ಲಾ ಹಗರಣಗಳು ಬಹಿರಂಗವಾಗುತ್ತಿದ್ದಂತೆ ವಿಪಕ್ಷಗಳು ಸಾರ್ವಜನಿಕರದಲ್ಲಿ ಜಾಗೃತಿಮೂಡಿಸಲು ಮುಂದಾದರೆ ಹತಾಶರಾಗಿ ಅಹಿಂದ ವರ್ಗದಿಂದ ಬಂದ ನಾನು ಸಿಎಂ ಆಗಿರುವುದು ಬಿಜೆಪಿಗೆ ಇಷ್ಟವಿಲ್ಲ ಎಂದು ಹೇಳುವುಕ್ಕೆ ನಾಚಿಕೆಯಾಗಬೇಕು ಎಂದು ಜರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದಿಂದ ಬಂದವರು. ಅವರನ್ನು ಬಿಜೆಪಿ ಮೂರನೇ ಬಾರಿ ಪ್ರಧಾನಿ ಮಾಡಲು ಶ್ರಮಿಸಿದೆ. ನಿಮ್ಮಂಥ ಭ್ರಷ್ಟರಲ್ಲನ್ನಲ್ಲ. ಇಂಥ ಭಷ್ಟ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಕೆ ಮಾಡಿಕೊಳ್ಲುವುದು ನಾಚಿಕೇಗೇಡು ಎಂದು ಸೂರ್ಯಕುಮಾರ್ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ್, ಟೌನ್ ಪ್ರಧಾನ ಕಾರ್ಯಧರ್ಶಿ ಪ್ರವೀಣ್, ಬುಲೆಟ್ ಚಂದ್ರು, ಮಾರ್ಕೆಟ್ ಕುಮಾರ್, ಮಾದ್ಯಮ ಪ್ರಮುಖ್ ಮಂಜುನಾಥ್, ರಾಮಸಮುದ್ರ ಶಿವು, ಗುರುಪ್ರಸಾದ್, ಕುಮಾರ್, ರಾಜೇಂದ್ರ ಹರಿ, ಪೋಟೋ ಕೃಷ್ಣ, ಬಂಗಾರನಾಯಕ, ಲೋಕೇಶ್, ಡೈವರ್ ಮಹದೇವಯ್ಯ, ಪ್ರದೀಪ್, ಲೋಕೇಶ್, ಕಿರಣ್, ಮೊದಲಾದವರು ಇದ್ದರು.