ವಿಶ್ವವಿಖ್ಯಾತ ಗೋಲಗುಂಬಜ್‍ಗೆ ಸೌರಶಕ್ತಿ ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ವಹಿಸಿಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.14:ವಿಶ್ವವಿಖ್ಯಾತ ಗೋಲಗುಂಬಜ್‍ಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಭೇಟಿ ನೀಡಿ ಗೋಲಗುಂಬಜ್‍ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳು ಹಾಗೂ ಗೋಲಗುಂಬಜ್‍ಕ್ಕೆ ದೀಪಾಲಂಕಾರ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಗೋಲಗುಂಬಜ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿಶ್ವವಿಖ್ಯಾತ ಐತಿಹಾಸಿಕ ಗೋಲಗುಂಬಜ್ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಲಿದ್ದು, ನೋಡುಗರಿಗೆ ಆಕರ್ಷಣೆಗೊಳಿಸಲು ಗೋಲಗುಂಬಜ್ ನಾಲ್ಕು ದಿಕ್ಕಿನಲ್ಲಿ ದೀಪಾಂಲಕಾರ ಕೈಗೊಳ್ಳಬೇಕು. ರಿನಿವ್ ಎನರ್ಜಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಸಿಎಸ್‍ಆರ್ ಅನುದಾನದಡಿ ಸೌರಶಕ್ತಿ ಅಳವಡಿಸಲಾಗುತ್ತಿದ್ದು, ಈ ಸೌರಶಕ್ತಿ ಖಾಸಗಿ ಕಂಪನಿಯವರು ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‍ನ್ನು ದೀಪಾಲಂಕಾರ, ವಸ್ತು ಸಂಗ್ರಹಾಲಯ, ಅಲ್ಲಿರುವ ಕಚೇರಿಗೆ ಬಳಸಿಕೊಳ್ಳುವುದು, ಉಳಿದ ವಿದ್ಯುತ್ ಹೆಸ್ಕಾಂಗೆ ಪಾವತಿಯಾಧಾರದ ಮೇಲೆ ವಿತರಣೆಗೆ ಕ್ರಮ ವಹಿಸಲು ತ್ವರಿತ ಕ್ರಿಯಾಯೋಜನೆ ಸಿದ್ಧಪಡಿಸಿ ಆಗಸ್ಟ್ ಮಧ್ಯಾವಧಿಯವರೆಗೆ ದೀಪಾಲಂಕಾರಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶ್ವವಿಖ್ಯಾತ ಗೋಲಗುಂಬಜ್‍ನ ಹಿಂದೆ ಖಾಲಿ ಇರುವ 10 ಎಕರೆ ಜಾಗೆಯಲ್ಲಿ ಗಿಡಗಳನ್ನು ನೆಟ್ಟು ಹಸರೀಕರಣ ಮಾಡಬೇಕು. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಗೋಲಗುಂಬಜ್‍ನಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕ್ಯಾಂಟಿನ್, ಟಿಕೆಟ್ ಕೌಂಟರ್‍ಗಳನ್ನು ವ್ಯವಸ್ಥಿತವಾಗಿ ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ವಿಜಯಕುಮಾರ, ವಿಜಯಪುರ ವಲಯದ ವರಣ್ಯಾಧಿಕಾರಿ ಸಂತೋಷ ಆಜೂರ, ಸೇರಿದಂತೆ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಉಪಸ್ತಿತರಿದ್ದರು.