7ನೇ ವೇತನ ಜಾರಿಗೊಳಿಸಲು ಆಗ್ರಹ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜು.14:- ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಸಹ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದ್ದು. ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್ ಅವರು ಶಾಸಕ ಡಿ.ರವಿಶಂಕರ್ ಅವರಿಗೆ ಸಂಘದ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ವಿವರಗಳು: ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸುವುದು. ಹಾಗೂ ಈ ಹಿಂದಿನ 6 ನೇ ವೇತನ ಆಯೋಗವು ದಿನಾಂಕ:01-06-2017 ರಲ್ಲಿ ರಚನೆಯಾಗಿ ದಿನಾಂಕ: 31-01-2018ರಲ್ಲಿ ವರದಿ ಸಲ್ಲಿಸಿ ಸರ್ಕಾರವು ದಿ: 01-03-2018 ರಲ್ಲಿ ಸರ್ಕಾರಿ ಆದೇಶ ಹೊರಡಿಸಿ ಕೇವಲ 9 ತಿಂಗಳಲ್ಲೇ 6 ನೇ ವೇತನ ಆಯೋಗ ಜಾರಿಗೊಳಿಸಲಾಗಿತ್ತು. ಆ ಸಂಪ್ರದಾಯದಂತೆ ರಾಜ್ಯ 6 ನೇ ವೇತನ ಆಯೋಗದ ವರದಿಯು ಅನುಷ್ಟಾನಗೊಂಡು ದಿ: 31-06-2022 ಕ್ಕೆ 5 ವರ್ಷ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ದಿನಾಂಕ: 01-07-2022 ರಿಂದ ಪರಿಷ್ಕರಣೆಗೊಳಿಸ ಬೇಕಾಗಿತ್ತು. ಸಂಘದ ಒತ್ತಡದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರವು ದಿ: 19-11-2022 ರಂದು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಕೆ.ಸುಧಾಕರ್‍ರಾವ್ ಇವರ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು.
ಕರ್ನಾಟಕ ಸರ್ಕಾರವು ರಾಜ್ಯ 7ನೇ ವೇತನ ಆಯೋಗಕ್ಕೆ ನಿಗದಿಪಡಿಸಿದ್ದ ಆರು ತಿಂಗಳ ಅವಧಿಯೊಳಗೆ ವರದಿಯನ್ನು ಪಡೆಯದೇ ದಿನಾಂಕ: 19-05-2023 ರಿಂದ 6 ತಿಂಗಳು ಮತ್ತು ದಿನಾಂಕ: 06-11-2023 ರಿಂದ 6 ತಿಂಗಳು ಸೇರಿದಂತೆ ಎರಡು ಭಾರಿ ಅವಧಿಯನ್ನು ವಿಸ್ತರಿಸಿರುತ್ತದೆ.
ನಂತರ ವೇತನ ಆಯೋಗವು ದಿ: 16-03-2024 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ವೇತನ ಆಯೋಗ ರಚನೆಯಾಗಿ ಇಂದಿಗೆ 19 ತಿಂಗಳು ಕಳೆದಿರುತ್ತದೆ ವೇತನ ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ‘ಸಂಬಂಧ ಸಮಗ್ರ ವರದಿಯನ್ನು ಸಿದ್ದಪಡಿಸಿ ಶೇ.40% ಫಿಟ್ ಮೆಂಟ್ ಸೌಲಭ್ಯ ನೀಡಲು ಮನವಿಯನ್ನು ಸಲ್ಲಿಸಲಾಗಿತ್ತು.
ಈ ಮಧ್ಯೆ ಸಂಘವು ದಿನಾಂಕ 01-03-2023 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಸರ್ಕಾರವು ದಿ 01-04-2023 ರಿಂದ ಅನ್ವಯವಾಗುವಂತೆ ಶೇ. 17% ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಮುಂದುವರೆದು ರಾಜ್ಯ ಸಂಘವು ದಿನಾಂಕ: 27-02-2024 ರಂದು ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮಾವೇಶವನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ್ದ 2.50 ಲಕ್ಷ ಸರ್ಕಾರಿ ನೌಕರರ ಸಮ್ಮುಖದಲ್ಲಿ ರಾಜ್ಯ 7ನೇ ವೇತನ ಆಯೋಗವು ವರದಿ ನೀಡಿದ ನಂತರ ಅನುಷ್ಠಾನಗೊಳಿಸುವ ಸ್ಪಷ್ಟ ಭರವಸೆಯನ್ನು ನೀಡಿತು.
ರಾಜ್ಯ 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದಾಗ್ಯೂ, ನೀತಿ ಸಂಹಿತೆ ಮುಗಿದ ನಂತರ ನೀಡುವ ಭರವಸೆಯನ್ನು ನೀಡಿದ್ದರು. ಈ ವರೆವಿಗೂ ಈಡೇರಿಲ್ಲ ಆದ್ದರಿಂದ ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಕ್ಷೇತ್ರದ ಶಾಸಕರು ಈ ಬಗ್ಗೆ ಚರ್ಚಿಸಿ ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶಂಕರೇಗೌಡ, ತಾಲೂಕು ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಜೆ.ಡಿ.ಶಶಿಕಿರಣ್, ತಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ.ಎನ್.ಸ್ವಾಮಿ. ಖಜಾಂಚಿ ಡಿ.ವಿ.ಗುಡಿ ಪ್ರಸನ್ನ ಇದ್ದರು.