ಬದುಕಿಗೆ ಶುದ್ಧ ನೀರು ಮುಖ್ಯ: ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.14: ಆರೋಗ್ಯವಂತ ಬದುಕಿಗೆ ಶುದ್ದ ಕುಡಿಯುವ ನೀರು ಬಹಳ ಮುಖ್ಯವಾಗಿದ್ದು ಗ್ರಾಮೀಣ ಪ್ರದೇಶಗಳಿಗೂ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲೂಕಿನ ಶೀಳನೆರೆ ಹೋಬಳಿಯ ನವಿಲುಮಾರನಹಳ್ಳಿ ಗ್ರಾಮದಲ್ಲಿ ಜಲಧಾರೆ ಯೋಜನೆಯಡಿ ತಾಲ್ಲೂಕಿನ 311 ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ನೀರು ಸಂಗ್ರಹಗಾರ ಮತ್ತು ಪಂಪಹೌಸ್ ಘಟಕದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆ.ಆರ್.ಪೇಟೆ. ಪಾಂಡವಪುರ, ನಾಗಮಂಗಲ ಸೇರಿದಂತೆ ಮೂರು ತಾಲೂಕು ಹಾಗೂ ಬೆಳ್ಳೂರು ಪಟ್ಟಣ ಸೇರಿದಂತೆ ಒಟ್ಟು 723 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ನವಿಲುಮಾರನಹಳ್ಳಿ ಬಳಿ ಒಂದು ಎಕರೆ ಪ್ರದೇಶವನ್ನು ಗುರುತಿಸಿ ಅಲ್ಲಿ ನೀರು ಸಂಗ್ರಹಗಾರ ಮತ್ತು ಪಂಪ್ ಹೌಸ್ ನಿರ್ಮಾಣ ಮಾಡಲು ಈಗಾಗಲೇ ಆರಂಭಿಸಿದ್ದು ಇದರಿಂದ ನಮ್ಮ ತಾಲ್ಲೂಕಿನ ನೂರಾರು ಗ್ರಾಮಗಳಿಗೆ ಜಲಧಾರ ಯೋಜನೆ ಅನುಕೂಲವಾಗಲಿದೆ.
ಜಲಧಾರೆ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಸೌಲಭ್ಯವನ್ನು ಕಲ್ಪಿಸುವ ಕಾಮಗಾರಿಯಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ಸಕಾಲದಲ್ಲಿ ಮಾಡಿ ಮುಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ, ಸಹಾಯಕ ಇಂಜಿನಿಯರ್‍ಗಳಾದ ಪ್ರವೀಣ್, ಬಿಂದು, ಪ್ರಾಜೆಕ್ಟ್ ಮ್ಯಾನೇಜರ್ ರಾಮಕುಮಾರ್, ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಜೆಡಿಎಸ್ ಮುಖಂಡ ನಾಗರಾಜು, ಶೀಳನೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಾಯತ್ರಿಸಿದ್ದೇಶ್, ಸದಸ್ಯ ಸಿದ್ದೇಶ್, ಆರ್.ಡಿ.ಕುಮಾರ್, ಪಿಡಿಒ ನವೀನ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರು ಹಾಜರಿದ್ದರು.