ಇಂದು ಹಳ್ಳಿಹಕ್ಕಿ ಹೆಚ್.ವಿ.ಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಕೆ.ಆರ್. ನಗರ, ಜು.14:- ಪಾರ್ಲಿಮೆಂಟ್ ಪ್ರದಕ್ಷಿಣೆಗಳು ಪುಸ್ತಕ ಬಿಡುಗಡೆಗಾಗಿ ಲಂಡನ್ ನಗರಕ್ಕೆ ತೆರಳುತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಿಗೆ ಜುಲೈ, 14 ರಂದು ಭಾನುವಾರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ.
ಲಂಡನ್ ನಗರದ ಬಸವ ಬಳಗ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದಾರೆ.
ನಾಡಿನ ಹಿರಿಯ ರಾಜಕಾರಣಿಗಳು ಆಗಿರುವ ಎಚ್. ವಿಶ್ವನಾಥ್ ಅವರು ತಮ್ಮ ರಾಜಕೀಯ ಅನುಭವ ಮತ್ತು ಅಧ್ಯಯನವನ್ನು ಪಾರ್ಲಿಮೆಂಟ್ ಪ್ರದಕ್ಷಿಣೆಗಳು ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಹೊರ ತಂದಿದ್ದು ಅದು ಜುಲೈ 20ರಂದು ಶನಿವಾರ ಲಂಡನ್ ನಗರದ ಥೇಮ್ಸ್ ನದಿ ದಂಡೆಯಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯ ಮುಂದೆ ಬಿಡುಗಡೆಯಾಗಲಿದೆ.
ಜುಲೈ 14 ರಂದು ಬೆಳಿಗ್ಗೆ 10.30 ಕ್ಕೆ ಎಚ್. ವಿಶ್ವನಾಥ್ ಮತ್ತು ಶಾಂತಮ್ಮ ವಿಶ್ವನಾಥ್ ಅವರಿಗೆ ಆಯೋಜಿಸಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪೆÇ್ರ. ಮುಜಾಫರ್ ಅಸ್ಸಾದಿ, ಇಂಡಿಯನ್ ಎಕ್ಸ್ ಪ್ರೆಸ್ ಆಂಗ್ಲ ದೈನಿಕದ ಮೈಸೂರು ವಿಭಾಗದ ಸ್ಥಾನಿಕ ಸಂಪಾದಕ ಕೆ. ಶಿವಕುಮಾರ್ ಮತ್ತು ಲೇಖಕರು ಹಾಗೂ ಸಂಸ್ಕೃತಿ ಚಿಂತಕರಾದ ಶುಭದ ಪ್ರಸಾದ್ ಉಪಸ್ಥಿತರಿರುವರು.
ಅಂದು ನಡೆಯುವ ಬೀಳ್ಕೊಡುಗೆ ಸಮಾರಂಭಕ್ಕೆ ಹೆಚ್. ವಿಶ್ವನಾಥ್ ಅವರ ಅಭಿಮಾನಿಗಳು ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕ ಕೆ.ಎಲ್. ರಮೇಶ್ ಕೋರಿದ್ದಾರೆ.