ರೈಲ್ವೆ ಪ್ಲೈಓವರ್ ಮತ್ತು ಅಂಡರ್‍ಪಾಸ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.14: ಸುಮಾರು 40-50 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಫ್ಲೈಓವರ್ ಹಾಗೂ ಅಂಡರ್‍ಪಾಸ್ ನಿರ್ಮಾಣ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ಮಂಡ್ಯ ಜಿಲ್ಲೆಯ ಸಂಸದ ಹಾಗು ಕೇಂದ್ರ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ವಿಶೇಷ ಆಸಕ್ತಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಕೇಂದ್ರ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಗಳನ್ನು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ತಾಲ್ಲೂಕಿನ ಗಡಿ ಭಾಗದಲ್ಲಿ ಹಾಯ್ದುಹೋಗಿರುವ ರೈಲ್ವೆ ಮಾರ್ಗ ಕೇವಲ ಹಲವು ಗ್ರಾಮಗಳಿಗೆ ಮಾತ್ರ ಅನುಕೂಲ ಕಲ್ಪಿಸುತ್ತಿದ್ದು ಇದರೊಂದಿಗೆ ಅನೇಕ ಸಮಸ್ಯೆಗಳೂ ಸಹ ರೈತರಿಗೆ ಎದುರಾಗಿದ್ದವು. ಇವುಗಳನ್ನು ಪರಿಹರಿಸುವ ಗೋಜಿಗೆ ಯಾವುದೇ ನಾಯಕರುಗಳು ಮುಂದಾಗಿರಲಿಲ್ಲ. ಕುಮಾರಸ್ವಾಮಿಯವರು ಕೇಂದ್ರದ ಮಂತ್ರಿಯಾದ ನಂತರ ನಮ್ಮ ತಾಲ್ಲೂಕಿನಲ್ಲಿ ರೈಲ್ವೆ ಮಾರ್ಗದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ಮನವಿ ಮಾಡಿದ ಪರಿಣಾಮ ಅವರು ಕೇಂದ್ರದ ತಮ್ಮ ಸಹೋದ್ಯೋಗಿ ರೈಲ್ವೆ ಸಚಿವರೊಂದಿಗೆ ಮಾತನಾಡಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕುಮಾರಣ್ಣನವರ ರೈತಪರ ಕಾಳಜಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಗಳು. ತಾಲ್ಲೂಕಿನ ಅಕ್ಕಿಹೆಬ್ಬಾಳು, ದುಡುಕನಹಳ್ಳಿ, ಬೀರವಳ್ಳಿ ಗ್ರಾಮಗಳಲ್ಲಿ ಪ್ಲೈ ಓವರ್ ಮತ್ತು ಅಂಡರ್‍ಪಾಸ್ ಮತ್ತು ಮಂದಗೆರೆ ಗ್ರಾಮದಲ್ಲಿ ರೈಲ್ವೆ ಪ್ಲೈ ಓವರ್ ಮತ್ತು ರೈಲ್ವೇಗೇಟ್ ನಿರ್ಮಾಣ ಆಗಬೇಕಾಗಿರುತ್ತದೆ. ತಾವುಗಳು ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಪ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಾಣದ ಸಮಸ್ಯೆಗಳನ್ನು ಪರಿಹರಿಸಿಕೊಟ್ಟರೆ ನಮ್ಮ ಭಾಗದ ಜನರಿಗೆ ಅನುಕೂಲ ಮಾಡುವಂತೆ ಸೂಚನೆ ನೀಡಿದರು ಎಂದರು.
ರೈಲ್ವೆ ಇಲಾಖೆಯ ಡೆಪ್ಯುಟಿ ಚೀಫ್ ಇಂಜಿನಿಯರ್ ಗೂಟನ್ ಮಾತನಾಡಿ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ನಿರ್ಮಾಣಕ್ಕೆ ಅಗತ್ಯವಾಗಿರುವ ಸ್ಥಳವನ್ನು ರೈಲ್ವೆ ಇಲಾಖೆಯ ಮುಖಾಂತರ ಖರೀದಿ ಮಾಡಬೇಕಾಗುತ್ತದೆ. ಅದಕ್ಕೆ ರೈತರು ಸಹಕಾರ ನೀಡಬೇಕು ಎಂದರು. ಇಲ್ಲಿರುವ ರೈಲ್ವೆ ಟ್ರಾಕ್‍ಗಳಿಗೆ ಹೊಂದಿಕೊಂಡಿರುವ ರಸ್ತೆಗಳನ್ನು ಒಂದಷ್ಟು ಬದಲಾವಣೆ ಮಾಡಬೇಕಾಗುತ್ತದೆ ಅದನ್ನು ತಾವು ರಾಜ್ಯ ಸರ್ಕಾರದ ಜತೆ ಪತ್ರ ವ್ಯವಹಾರ ಮಾಡಲು ಅವಕಾಶ ಮಾಡಿಸಿಕೊಡಿ ಎಂದರು .
ಭೇಟಿ ಸಮಯದಲ್ಲಿ ವಕೀಲ ನವೀನ್‍ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರ ಅಕ್ಕಿಹೆಬ್ಬಾಳು ರಘು, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಗ್ರಾಮ ಪಂಚಾಯತಿ ಸದಸ್ಯರಾದ ಮಂಜೇಗೌಡ, ಸಾಕ್ಷೀಬೀಡು ಅಶೋಕ್, ಪ್ರಭುದೇವೇಗೌಡ, ಈರೇಗೌಡ, ಬಿ.ಆರ್.ಕೃಷ್ಣ, ಬಿ.ಎನ್.ಕುಮಾರ್, ಬಸವಲಿಂಗಪ್ಪ, ಎನ್.ಕೆ.ನಿಂಗೇಗೌಡ, ಬಿ.ಟಿ.ಕುಮಾರ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.