ಜಿಲ್ಲೆಯಾದ್ಯಂತ 2.90 ಲಕ್ಷ ಜಾನುವಾರುಗಳಿಗೆ ಲಸಿಕೆ:ಡಾ.ಎಸ್.ಡಿ.ಅವಟಿ
ಕಲಬುರಗಿ:ಜು.13:ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಜೂನ್ 20 ರಂದು ಆರಂಭಗೊಂಡು ಇದೇ ಜುಲೈ 20ರ ವರೆಗೆ ನಡೆಯುವ ಜಾನುವಾರುಗಳಿಗೆ ಲಸಿಕಾಕರಣ ಕಾರ್ಯಕ್ರಮದಡಿ ಇದೂವರೆಗೆ 3,61,700 ಜಾನುವಾರುಗಳ ಪೈಕಿ 2,90,000 ಜನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಉಚಿತ ಲಸಿಕೆ ಹಾಕಿಸಲಾಗಿದೆ ಎಂದು ಪಶುಸಂಗೋಪನಾ ಹಾಗೂ ಪಶುಪಾಲನಾ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ತಿಳಿಸಿದ್ದಾರೆ.
ಇದಲ್ಲದೆ ಆಡು/ ಕುರಿಗಳಿಗೆ ಕರಳು ಬೇನೆ ರೋಗದ ವಿರುದ್ಧ ಉಚಿತ ಲಸಿಕೆ ಸಹ ನೀಡಲಾಗುತ್ತಿದ್ದು, ಇದೂವರೆಗೆ ಜಿಲ್ಲೆಯಲ್ಲಿ 5,25,000 ಆಡು/ ಕುರಿಗಳ ಪೈಕಿ 4,25,000 ಆಡು/ ಕುರಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೀದಿ ಬದಿ ಜಾನುವಾರುಗಳಿಗೆ ಸಂಚಾರಿ ಚಿಕಿತ್ಸೆ ನೀಡಲು ಜಿಲ್ಲೆಯಾದ್ಯಂತ ಗುತ್ತಿಗೆ ಆಧಾರದ ಮೇಲೆ ತಾಲೂಕಿಗೆ ಒಂದರಂತೆ ಒಟ್ಟು 11 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು (1962) ನೀಡಲಾಗಿದ್ದು, ಇದರ ನಿರ್ವಹಣೆ ಜವಾಬ್ದಾರಿ ಎಜುಸ್ಪಾರ್ಕ್ ಪ್ರೈ.ಲಿ. ಕಂಪನಿ ವಹಿಸಿಕೊಂಡಿದೆ ಎಂದಿರುವ ಅವರು ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಉಪ ನಿರ್ದೇಶಕರ ಪ್ರಕಾರ ಜಿಲ್ಲೆಯಲ್ಲಿ 216 ಅಲೆಮಾರಿ ಕುರಿಗಾರರಿದ್ದು, ಅವರಿಗೆ ಇನ್ನು ಗುರುತಿನ ಚೀಟಿ ನೀಡಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.