ನಲಿ ಕಲಿ ಶಿಕ್ಷಣ ಮಕ್ಕಳಿಗೆ ಭದ್ರ ಬುನಾದಿ:ಶ್ರೀಧರ ನಡುಗಡ್ಡಿ
ಇಂಡಿ: ಜು.13:ನಲಿಕಲಿ ಶಿಕ್ಷಣವನ್ನು ಪುನಶ್ಚೇತನಗೊಳಿಸಿ ಮಕ್ಕಳಲ್ಲಿ ಪ್ರತಿನಿತ್ಯ ಉತ್ಸಾಹ ತುಂಬುವ ಕಾರ್ಯ ಶಿಕ್ಷಕರಿಂದ ನಡೆಯಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ ನಡುಗಡ್ಡಿ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ವತಿಯಿಂದ ಆಯೋಜಿಸಿದ್ದ ಹಿರೇರೂಗಿ-ತಡವಲಗ ಕ್ಲಸ್ಟರ್ ಮಟ್ಟದ ನಲಿ-ಕಲಿ ಶಿಕ್ಷಕರ ಸಮಾಲೋಚನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಲಿ-ಕಲಿ ಶಿಕ್ಷಣ ಮಕ್ಕಳ ಭವಿಷ್ಯದ ಭದ್ರ ಬುನಾದಿ.
2008 ರಿಂದ ರಾಜ್ಯಾದ್ಯಂತ ಜಾರಿಗೊಂಡ ಈ ಪದ್ದತಿಯಲ್ಲಿ ಮಕ್ಕಳು ನಲಿಯುತ್ತ ಕಲಿಯಲಿ ಎಂಬ ತತ್ವ ಅಡಗಿದ್ದು, ಚಟುವಟಿಕೆಗಳ ಮೂಲಕ ಮಕ್ಕಳು ಆಡುತ್ತಾ ಹಾಡುತ್ತಾ ಕಲಿಯಲು ಶಿಕ್ಷಕರ ಸಹಕಾರ ಅಗತ್ಯ ಎಂದು ಹೇಳಿದರು.
ತಾಲೂಕ ನಲಿಕಲಿ ನೋಡಲ್ ಅಧಿಕಾರಿ ಬಸವರಾಜ ಗೋರನಾಳ ಮಾತನಾಡಿ, ವಿದ್ಯಾರ್ಥಿಯು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಿ, ಗೆಳೆಯರ ಸಹಕಾರದಲ್ಲಿ ಪುನರ್ಬಲನಗೊಂಡು, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮಥ್ರ್ಯ ಗಳಿಸುವುದು ಈ ಪದ್ಧತಿಯ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.
ಹಿರೇರೂಗಿ ಕ್ಲಸ್ಟರ್ ಸಿಆರ್ಪಿ ಸಂತೋಷ ಚವ್ಹಾಣ ಮಾತನಾಡಿ, ನಲಿ-ಕಲಿ ಪದ್ಧತಿಯಲ್ಲಿರುವ ಬಹುಹಂತದ ಕಲಿಕೆ, ಸ್ವಕಲಿಕೆ, ಸ್ವವೇಗದ ಕಲಿಕೆ, ಸಂತಸದ ಕಲಿಕೆಯಂತಹ ವಿಶೇಷತೆಗಳನ್ನು ವರ್ಗಕೊಣೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯ ಎಂದು ಹೇಳಿದರು.
ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಈ ಪದ್ಧತಿ ಶಿಶು ಕೇಂದ್ರಿತ-ಚಟುವಟಿಕೆ ಆಧಾರಿತವಾಗಿ ಮಗುವಿಗೆ ಶಾಲಾ ಶಿಕ್ಷಣದೊಂದಿಗೆ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದ್ದು, ಮಗುವಿಗೆ ಸ್ವಕಲಿಕಾ ಪ್ರಕ್ರಿಯೆಯಲ್ಲಿ ತೊಡಗಲು ಸಹಕಾರಿಯಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು. ತಡವಲಗ ಸಿಆರ್ಪಿ ಪ್ರಕಾಶ ರಾಠೋಡ, ಸಂಪನ್ಮೂಲ ಶಿಕ್ಷಕರಾಗಿ ಅಶೋಕ ಚವ್ಹಾಣ, ಆರ್ ಆರ್ ಬೇನೂರ ಹಾಗೂ ಹಿರೇರೂಗಿ-ತಡವಲಗ ಕ್ಲಸ್ಟರ್ ವ್ಯಾಪ್ತಿಯ ನಲಿ-ಕಲಿ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕ ಎಸ್ ಆರ್ ಚಾಳೇಕರ ಕಾರ್ಯಕ್ರಮ ನಿರ್ವಹಿಸಿದರು.