ಸರಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಭಾಲ್ಕಿ:ಜು.13: ಸರಕಾರಿ ನೌಕರರ ಏಳನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ತಾಲೂಕು ಸರಕಾರಿ ನೌಕರರ ಸಂಘ ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್ ನೇತೃತ್ವದಲ್ಲಿ ತಹಸೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಆರನೇ ವೇತನ ಆಯೋಗ ಜಾರಿಗೊಂಡು 2022ಕ್ಕೆ ಐದು ವರ್ಷ ಪೂರ್ಣಗೊಂಡಿವೆ. ಆದರೆ ಇದು ವರೆಗೂ ವೇತನ, ಭತ್ಯೆ ಪರಿಷ್ಕರಣೆಗೊಂಡಿಲ್ಲ. ಹೀಗಾಗಿ ಕೂಡಲೇ ಏಳನೇ ವೇತನ ಆಯೋಗ ಜಾರಿಗೊಳಿಸಬೇಕು.
ಜತೆಗೆ ನೂತನ ಪಿಂಚಣಿ ಯೋಜನೆ ರದ್ದು ಪಡಿಸುವಂತೆ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕೂಡ ನೂತನ ಪಿಂಚಣಿ ಯೋಜನೆ ರದ್ದು ಪಡಿಸಿಲ್ಲ. ಜತೆಗೆ ಆರೋಗ್ಯ ಸಂಜೀವಿನಿ ಯೋಜನೆ ಕೂಡ ಅನುಷ್ಠಾನಗೊಂಡಿಲ್ಲ. ಕೂಡಲೇ ಸರಕಾರ ಸರಕಾರಿ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರಮುಖರಾದ ದತ್ತು ಕಾಟಕರ್, ಬಸವರಾಜ ಮರೆ, ನಾಗಭೂಷಣ ಮಾಮಡಿ, ಕುಪೇಂದ್ರ ಜಗಶೆಟ್ಟೆ, ಪ್ರಕಾಶ ಮಹಾಗಾಂವೆ, ವಿಶ್ವನಾಥ, ಸಹಾದೇವ, ಶಿವಕುಮಾರ, ಅರವಿಂದ ಪಾಟೀಲ್, ಅಶೋಕ ಕುಂಬಾರ, ತಾನಾಜಿ, ರವಿ, ಉತ್ತಮ, ಅಶೋಕ ಬಿರಾದಾರ್, ಅಶೋಕ ತಾಂಬೂಳೆ ಸೇರಿದಂತೆ ಹಲವರು ಇದ್ದರು.