7ನೇ ವೇತನ ಜಾರಿಗೆ ನೌಕರ ಸಂಘ ಒತ್ತಾಯ
ಆಳಂದ: ಜು.13:ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಜಾರಿಗೊಳಿಸಬೇಕೆಂಬ ಇನ್ನಿತರ ಪ್ರಮುಖ ಬೇಡಿಕೆಗೆ ಒತ್ತಾಯಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ. ಮಹಾಂತೇಶ ಪಾಟೀಲ ನೇತೃತ್ವದಲ್ಲಿ ನೌಕರರು ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಜಮಾಯಿಸಿದ್ದ ನೌಕರರು, ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪಾ ಬಿರಾದಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖಜೂರೆ, ಮುಖ್ಯಗುರು ಸಂಘದ ಅಧ್ಯಕ್ಷ ಮರೆಪ್ಪಾ ಬಡಿಗೇರ ಅವರು ಮಾತನಾಡಿದರು.
ನೌಕರರು ರಾಜ್ಯದಲ್ಲಿ 6 ಲಕ್ಷ ನೌಕರರಿದ್ದು 2 ಲಕ್ಷ ಹುದ್ದೆಗಳು ಖಾಲಿಯಿದ್ದರು ಸಹ ಸರ್ಕಾರದ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಪಿಸುವ ಕಾರ್ಯದ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಶ್ರಮವಿದೆ. ಇಂಥ ಕಾರ್ಯಾಂಗದ ನೌಕರರ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಸಲ್ಲಿಕೆಯಾದ 7ನೇ ವೇತನ ಆಯೋಗದ ವರದಿ ಯಥಾವತ್ತಾಗಿ ಆದೇಶಿಸಿ ಅನುಷ್ಠಾನ ಕೈಗೊಳ್ಳಬೇಕು. ಎನ್‍ಪಿಎಸ್ ರದ್ದುಪಡಿಸಿ ನೌಕರರ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ತರಬೇಕು. ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂಬುವ ಇನ್ನಿತರ ಬೇಡಿಕೆಯ ಮನವಿಯನ್ನು ನೌಕರರ ಸಂಘದ ಅಧ್ಯಕ್ಷ ಡಾ. ಮಹಾಂತೇಶ ಪಾಟೀಲ ಅವರು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಪರ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಕಿರುಕುಳ ಸಲ್ಲ:
ತಾಲೂಕಿನಲ್ಲಿ ಹಲವು ಸಂಘಟನೆಗಳ ಹೆಸರಿನಲ್ಲಿ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಕಿರುಕುಳ ಒತ್ತಡ ಹೇರಲಾಗುತ್ತಿದೆ. ಇದರಿಂದಾಗಿ ಕರ್ತವ್ಯಕ್ಕೆ ಅಡಿಯಾಗುತ್ತಿದೆ. ಮಾನಸಿಕವಾಗಿ ಕುಗ್ಗುವಂತಾಗಿದೆ. ಇದನ್ನು ನಿಲ್ಲಬೇಕು ಎಂಬುದು ನೌಕರರ ಒತ್ತಾಯವಾಗಿದೆ.
ಸರ್ಕಾರಕ್ಕೆ ಬೇಡಿಕೆ:
ರಾಜ್ಯ ಸರ್ಕಾರಿ ನೌಕರರು ತಮ್ಮ ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಸಂಘದಿಂದ ಸಲ್ಲಿಸಿದ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಮುಂದಿನ ಕ್ರಮಕ್ಕೆ ಕಳುಹಿಸಿಕೊಡಲಾಗುವುದು.
ಕಳಕಳಿಯ ಮನವಿ:
ನಮ್ಮ ಹೋರಾಟ ಸರ್ಕಾರದ ವಿರುದ್ಧವಾಗಲಿ ಅಥವಾ ಕರ್ತವ್ಯ ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಕೊಡುವ ಉದ್ದೇಶವಾಗಿಲ್ಲ. ನ್ಯಾಯಯುತ ಹಕ್ಕಿನ ಬೇಡಿಕೆಗೆ ಮನವಿ ಸಲ್ಲಿಸಲಾಗುತ್ತಿದೆ. ಸರ್ಕಾರ ನೌಕರರ ಬೇಡಿಕೆಯನ್ನು ಪರಿಗಣಿಸಿ ಅನುಷ್ಠಾನಗೊಳಿಸಬೇಕು ಎಂಬುದು ಇಡೀ ನೌಕರರ ಕಳಕಳಿಯ ಮನವಿಯಾಗಿದೆ.
ಡಾ. ಮಹಾಂತೇಶ ಪಾಟೀಲ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು.