7ನೇ ವೇತನ ಜಾರಿಗೆ ಆಗ್ರಹಿಸಿ ನೌಕರರ ಸಂಘದಿಂದ ಡಿ.ಸಿ.ಗೆ ಮನವಿ ಸಲ್ಲಿಕೆ
ಕಲಬುರಗಿ,ಜು.13: ಸರ್ಕಾರಿ ನೌಕರರಿಗೆ 7ನೇ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ನೇತೃತ್ವದಲ್ಲಿ ನೌಕರರ ಸಂಘ ನಿಯೋಗವು ಶುಕ್ರವಾರ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಮನವಿ ಪತ್ರದಲ್ಲಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ತರಲು ಹಾಗೂ ಸರ್ಕಾರಿ ನೌಕರರು ಮತ್ತು ಅವಲಂಬಿತ ಕೂಟಂಬ ಸದಸ್ಯರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ (ಕ್ಯಾಶಲೆಸ್ ಟ್ರೀಟ್ ಮೆಂಟ್) ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯ ಮಾಡಲಾಗಿದೆ.
ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೂ ಮನವಿ:
ಶನಿವಾರ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರನ್ನು ಭೇಟಿ ಮಾಡಿದ ನಿಯೋಗವು ನೌಕರರ ಬಹು ದಿನದ ಬೇಡಿಕೆಯಾದ ಏಳನೇ ವೇತನ ಸೇರಿ ಇನ್ನಿತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಮದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಮಠಪತಿ, ಹಣಮಂತರಾಯ ಗೊಳಸಾರ, ಸತೀಷ್ ಸಜ್ಜನ್, ವಿಜಯಕುಮಾರ ನಾಗೂರ, ವೀರೇಶ ಪೂಜಾರಿ, ಹಣಮಂತ ಮರಡಿ, ಅವ್ವಣ್ಣ, ಧನಂಜಯ್ ಸೇರಿದಂತೆ ಅನೇಕ ನೌಕರರು ಉಪಸ್ಥಿತರಿದ್ದರು.